ರಫೇಲ್ ನಿಯೋಜನೆ ಭಾರತದ ಸಾರ್ವಭೌಮತ್ವಕ್ಕೆ ಕಣ್ಣು ಹಾಕಿದವರಿಗೆ ಪ್ರಬಲ ಸಂದೇಶ: ರಾಜನಾಥ್ ಸಿಂಗ್
ಹೊಸದಿಲ್ಲಿ, ಸೆ.10: ಪೂರ್ವ ಲಡಾಖ್‌ನ ಗಡಿಭಾಗದಲ್ಲಿ ಭಾರತ-ಚೀನಾ ಪಡೆಗಳ ಮಧ್ಯೆ ಉದ್ವಿಗ್ನತೆ ಮುಂದುವರಿದಿರುವಂತೆಯೇ, ಅಂಬಾಲಾ ವಾಯುನೆಲೆಯಲ್ಲಿ ಗುರುವಾರ ರಫೇಲ್ ಯುದ್ಧವಿಮಾನಗಳ ಪ್ರಥಮ ತಂಡವನ್ನು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ನಿಯೋಜಿಸಲಾಗಿದೆ.
ಬಳಿಕ ಮಾತನಾಡಿದ ರಾಜನಾಥ್ ಸಿಂಗ್, ನಮ್ಮ ಗಡಿಭಾಗದಲ್ಲಿ ಸೃಷ್ಟಿಸಲಾಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ವಾಯುಪಡೆಗೆ ರಫೇಲ್ ಯುದ್ಧವಿಮಾನಗಳ ನಿಯೋಜನೆ ಅತ್ಯಂತ ಮಹತ್ವದ್ದಾಗಿದೆ. ಇದು ವಿಶ್ವಕ್ಕೆ, ಅದರಲ್ಲೂ ವಿಶೇಷವಾಗಿ ಭಾರತದ ಸಾರ್ವಭೌಮತ್ವದ ಮೇಲೆ ಕಣ್ಣು ಹಾಕಿದವರಿಗೆ ಪ್ರಬಲ ಸಂದೇಶವಾಗಿದೆ ಎಂದರು. ಅತ್ಯಾಧುನಿಕ ಸಮರ ವಿಮಾನವಾಗಿರುವ ರಫೇಲ್‌ನ ನಿಯೋಜನೆ ಗಡಿಭಾಗದಲ್ಲಿ ಅತ್ಯಂತ ನಿರ್ಣಾಯಕವಾಗಿದೆ. ವಾಯುಪಡೆಗೆ ರಫೇಲ್ ನಿಯೋಜನೆ ಭಾರತ-ಫ್ರಾನ್ಸ್ ಸಂಬಂಧವನ್ನು ಬಲಪಡಿಸಿದೆ. ಭಾರತಕ್ಕೆ ಎದುರಾಗಿರುವ ಭೌಗೋಳಿಕ ಸವಾಲನ್ನು ಪರಿಹರಿಸಲು ಎರಡೂ ಪ್ರಜಾತಾಂತ್ರಿಕ ದೇಶಗಳು ಒಗ್ಗೂಡಿ ಕಾರ್ಯನಿರ್ವಹಿಸಲಿವೆ ಎಂದು ಸಿಂಗ್ ಹೇಳಿದರು.
ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಮಾತನಾಡಿ, ಭಾರತೀಯ ವಾಯುಪಡೆಗೆ ರಫೇಲ್ ನಿಯೋಜನೆ ದ್ವಿಪಕ್ಷೀಯ ರಕ್ಷಣಾ ಸಂಬಂಧದ ನೂತನ ಅಧ್ಯಾಯವಾಗಿದೆ. ಫ್ರಾನ್ಸ್‌ನ ಜಾಗತಿಕ ಮಿಲಿಟರಿ ಪೂರೈಕೆ ಸರಪಳಿಯೊಂದಿಗೆ ಭಾರತದ ರಕ್ಷಣಾ ಉದ್ದಿಮೆಯನ್ನು ಸಂಯೋಜಿಸಲು ಫ್ರಾನ್ಸ್ ಪೂರ್ಣ ಬದ್ಧವಾಗಿದೆ ಎಂದರು. ರಕ್ಷಣಾ ಸಿಬಂದಿ ಮುಖ್ಯಸ್ಥ ಜ ಬಿಪಿನ್ ರಾವತ್, ಏರ್‌ಚೀಫ್ ಮಾರ್ಷಲ್ ಆರ್‌ಕೆಎಸ್ ಭದೂರಿಯಾ, ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ಭಾರತದಲ್ಲಿ ಫ್ರಾನ್ಸ್‌ನ ರಾಯಭಾರಿ ಇಮಾನ್ಯುವೆಲ್ ಲೆನಾಯ್ನ್, ಏರ್ ಜನರಲ್ ಎರಿಕ್ ಅಟೆಲ್ಲೆಟ್, ಫ್ರಾನ್ಸ್ ವಾಯುಪಡೆಯ ಉಪ ಮುಖ್ಯಸ್ಥ, ದಸಾಲ್ಟ್ ಏವಿಯೇಷನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎರಿಕ್ ಟ್ರಾಪಿಯರ್, ಎಂಬಿಡಿಎ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎರಿಕ್ ಬೆರೆಂಜರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸರ್ವಧರ್ಮ ಪೂಜೆ, ಸಾಂಪ್ರದಾಯಿಕ ಜಲಫಿರಂಗಿ ಸ್ವಾಗತ, ವಾಯುಪಡೆ ವಿಮಾನಗಳಿಂದ ಆಕರ್ಷಕ ಕವಾಯತು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಪ್ರಥಮ ತಂಡದಲ್ಲಿರುವ 5 ರಫೇಲ್ ಯುದ್ಧವಿಮಾನಗಳು ಭಾರತೀಯ ವಾಯುಪಡೆಯ ‘ಗೋಲ್ಡನ್ ಆ್ಯರೋಸ್’ ದಳದ ಭಾಗವಾಗಿರಲಿದೆ.