ಎನ್‌ಎಸ್‌ಡಿಯ ನೂತನ ಅಧ್ಯಕ್ಷರಾಗಿ ನಟ ಪರೇಶ್ ರಾವಲ್ ನಿಯೋಜನೆ

Update: 2020-09-10 16:48 GMT

ಹೊಸದಿಲ್ಲಿ, ಸೆ. 10: ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಶಿಫಾರಸಿನಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರನ್ನಾಗಿ ಬಾಲಿವುಡ್ ನಟ ಹಾಗೂ ಬಿಜೆಪಿಯ ಮಾಜಿ ಸಂಸದ ಪರೇಶ್ ರಾವಲ್ ಅವರನ್ನು ನಿಯೋಜಿಸಿದ್ದಾರೆ.

ಸಾಂಸ್ಕೃತಿಕ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವಿಟರ್‌ನಲ್ಲಿ ಪರೇಶ್ ರಾವಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ‘‘ಶ್ರೇಷ್ಠ ಕಲಾವಿದ ಸರ್ ಪರೇಶ್ ರಾವಲ್ ಅವರನ್ನು ಭಾರತದ ರಾಷ್ಟ್ರಪತಿ ಅವರು ರಾಷ್ಟ್ರೀಯ ನಾಟಕ ಶಾಲೆಗೆ ಅಧ್ಯಕ್ಷರನ್ನಾಗಿ ನಿಯೋಜಿಸಿದ್ದಾರೆ.

 ಈ ಪ್ರತಿಭಾನ್ವಿತರಿಂದ ದೇಶದ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪರೇಶ್ ರಾವಲ್ ಅವರನ್ನು ನಾಲ್ಕು ವರ್ಷಗಳ ಅವಧಿಗೆ ನಿಯೋಜಿಸಲಾಗಿದೆ ಎಂದು ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 2017ರ ಆಗಸ್ಟ್‌ನಿಂದ ಈ ಸ್ಥಾನ ಖಾಲಿ ಇತ್ತು. ಸಂಸ್ಕೃತಿ ಸಚಿವಾಲಯ ಅರ್ಹರ ಹೆಸರನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಿತ್ತು. ರಾಷ್ಟ್ರಪತಿ ಅವರು ಪ್ರಸಕ್ತ ನೀತಿ-ನಿಯಮಗಳಂತೆ ನಾಲ್ಕು ವರ್ಷಗಳ ಅವಧಿಗೆ ಪರೇಶ್ ರಾವಲ್ ಅವರನ್ನು ಎನ್‌ಎಸ್‌ಡಿಯ ಅಧ್ಯಕ್ಷ ಸ್ಥಾನಕ್ಕೆ ನಿಯೋಜಿಸಿದ್ದಾರೆ ಎಂದು ಸಾಂಸ್ಕೃತಿಕ ಸಚಿವಾಲಯದ ಮಾಧ್ಯಮ ಸಲಹೆಗಾರ ನಿತಿನ್ ತ್ರಿಪಾಠಿ ತಿಳಿಸಿದ್ದಾರೆ. ನಾಟಕ ರಚನೆಕಾರ ಹಾಗೂ ನಾಟಕ ನಿರ್ದೇಶಕ ರತನ್ ತಿಯಾಮ್ 2013ರಿಂದ 2017ರ ವರೆಗೆ ಎನ್‌ಎಸ್‌ಡಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News