ಚೆನ್ನೈ ತಂಡಕ್ಕೆ ದೀಪಕ್ ಚಹಾರ್ ಸೇರ್ಪಡೆ
Update: 2020-09-10 23:56 IST
ದುಬೈ, ಸೆ.10: ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಎರಡನೇ ಬಾರಿ ಕೊರೋನ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯನ್ನು ಸ್ವೀಕರಿಸಿದ್ದಾರೆ. ಸೆಪ್ಟಂಬರ್ 19ರಿಂದ ಯುಎಇನಲ್ಲಿ ಆರಂಭವಾಗಲಿರುವ ಐಪಿಎಲ್‌ನಲ್ಲಿ ಭಾಗಿಯಾಗಲು ಚೆನ್ನೈ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಚೆನ್ನೈ ತಂಡ ದುಬೈಗೆ ತಲುಪಿದ ಬಳಿಕ ಕೊರೋನ ವೈರಸ್ ಸೋಂಕಿಗೆ ಒಳಗಾದ ಹಲವು ಸದಸ್ಯರ ಪೈಕಿ ಕ್ರಿಕೆಟಿಗರಾದ ಚಹಾರ್ ಹಾಗೂ ಋತುರಾಜ್ ಗಾಯಕ್ವಾಡ್ ಇದ್ದರು. ‘‘ದೀಪಕ್ ಚಹಾರ್ ಎರಡು ಬಾರಿ ಕೋವಿಡ್-19ನಲ್ಲಿ ನೆಗೆಟಿವ್ ವರದಿ ಸ್ವೀಕರಿಸಿದ್ದು, ತಂಡಕ್ಕೆ ವಾಪಸಾಗಿದ್ದಾರೆ. ಇದೀಗ ಬಿಸಿಸಿಐ ಶಿಷ್ಟಾಚಾರದ ಪ್ರಕಾರ ಕೋವಿಡ್‌ನಿಂದ ಚೇತರಿಸಿಕೊಂಡಿರುವ ಸೂಚಕವಾಗಿ ಹೃದಯ ತಪಾಸಣೆಗೆ ಒಳಗಾಗಲಿದ್ದಾರೆ. ಆ ನಂತರ ಮತ್ತೊಂದು ಕೋವಿಡ್ ಟೆಸ್ಟ್‌ಗೆ ಒಳಪಡಲಿದ್ದು, ಅದರಲ್ಲಿ ನೆಗೆಟಿವ್ ವರದಿ ಬಂದರೆ ತರಬೇತಿಗೆ ಸೇರಬಹುದು’’ ಎಂದು ಸಿಎಸ್‌ಕೆ ಸಿಇಒ ಕೆ.ಎಸ್. ವಿಶ್ವನಾಥನ್ ಪಿಟಿಐಗೆ ತಿಳಿಸಿದರು.