ಮಂಗಳೂರಿನಲ್ಲಿ ಮುಂದುವರಿದ ಭಾರೀ ಮಳೆ

Update: 2020-09-11 07:00 GMT

ಮಂಗಳೂರು, ಸೆ.10: ನಗರದಲ್ಲಿ ಗುರುವಾರ ಮುಸ್ಸಂಜೆ ಆರಂಭಗೊಂಡ ಬಿರುಸಿನ ಮಳೆ ಶುಕ್ರವಾರವೂ ಮುಂದುವರಿದಿದೆ. ಈ ಮಧ್ಯೆ ಕೆಲವೆಡೆಗಳಲ್ಲಿ ಅವಘಡಗಳು ಸಂಭವಿಸಿರುವುದು ವರದಿಯಾಗಿದೆ.

ನಗರದ ಕುದ್ರೋಳಿಯ ಪ್ರಗತಿ ಅಪಾರ್ಟ್‌ಮೆಂಟ್ ಬಳಿ ಮಳೆನೀರು ಹರಿಯುತ್ತಿದ್ದ ತೋಡಿಗೆ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದ ಬಗ್ಗೆ ಮಾಹಿತಿ ಲಭಿಸಿದೆ. ದೇರೇಬೈಲ್‌ ಚರ್ಚ್ ಬಳಿ ಗುಡ್ಡ ಕುಸಿದಿದ್ದು, ಮನೆಗಳು ಅಪಾಯದ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ.

ಜಪ್ಪಿನಮೊಗರು, ಎಕ್ಕೂರು, ಕಲ್ಲಾಪು ಸುತ್ತಮುತ್ತ ರಾಜಕಾಲುವೆ ಸಹಿತ ಒಳಚರಂಡಿ, ತೋಡುಗಳು ಮಳೆನೀರಿನಿಂದ ಉಕ್ಕಿ ಹರಿಯುತ್ತಿವೆ. ಇದರಿಂದ ಈ ಪ್ರದೇಶ ಜಲಾವೃತಗೊಂಡಿವೆ. ಎಕ್ಕೂರು ಬಳಿ ಹಲವು‌ ಮನೆಗಳಿಗೆ‌ ನೀರು ನುಗ್ಗಿವೆ. ಈ ಪ್ರದೇಶಗಳಿಗೆ ಮೇಯರ್ ದಿವಾಕರ ಪಾಂಡೇಶ್ವರ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡ ಆಗಮಿಸಿದ್ದು, ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. 

ಕೊಟ್ಟಾರ ಚೌಕಿ ಬಳಿ ಚರಂಡಿ ನೀರು ರಸ್ತೆಗೆ ನುಗ್ಗಿದ್ದು, ಸುಗಮವಾಗಿ ವಾಹನ, ಜನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

ನಗರ ಹೊರ ವಲಯದ ಮುನ್ನೂರು ಗ್ರಾಮ ದ ದೇಸೊಡಿ ಎಂಬಲ್ಲಿ ಲಿಂಗಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ.

ತೋಡಾರ್: ಮನೆಯ ಆವರಣ ಗೋಡೆ ಕುಸಿತ

ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಮದ ತೋಡಾರು ಗುಂಡೀರ್ ಗುಡ್ಡೆಯಲ್ಲಿ ಮನೆಯೊಂದರ ಆವರಣ ಗೋಡೆ ಭಾರೀ‌ ಮಳೆಗೆ ಕುಸಿದಿದ್ದು, ಎರಡು ಮನೆಗಳು ಅಪಾಯದಂಚಿನಲ್ಲಿದೆ.

ಇಲ್ಲಿನ ಮಯ್ಯದ್ದಿ ಹಾಗೂ ಸಿರಾಜುದ್ದೀನ್ ಎಂಬವರ ಮನೆ ಅಪಾಯದ ಅಂಚಿನಲ್ಲಿದೆ. ಈ ಪ್ರದೇಶದಲ್ಲಿ ಮಳೆಯಿಂದ ಕೃಷಿ ಭೂಮಿಗೂ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News