ಉತ್ತರ ಪ್ರದೇಶ: ಈ ವರ್ಷ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿತರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ಗೋಹತ್ಯೆ ಆರೋಪಿಗಳು

Update: 2020-09-11 14:01 GMT
ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರ ಪ್ರದೇಶದಲ್ಲಿ ಈ ವರ್ಷ ಆಗಸ್ಟ್ 19ರ ತನಕ  ಒಟ್ಟು 139 ಮಂದಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಿ ಬಂಧಿಸಲಾಗಿದ್ದರೆ ಇವರ ಪೈಕಿ 76 ಮಂದಿ ಗೋಹತ್ಯೆ ಪ್ರಕರಣದ ಆರೋಪಿಗಳಾಗಿರುವುದು ಗಮನಾರ್ಹ. ಬರೇಲಿ ವಲಯವೊಂದರಲ್ಲಿಯೇ ಇಂತಹ 44 ಪ್ರಕರಣಗಳು ದಾಖಲಾಗಿವೆ ಎಂದು ಸರಕಾರ ನೀಡಿದ ಮಾಹಿತಿಯಿಂದ ತಿಳಿದು ಬರುತ್ತದೆ.

ಈ ವರ್ಷ ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ದಾಖಲಾದ ಪ್ರಕರಣಗಳ ಪೈಕಿ ಆರು ಪ್ರಕರಣಗಳು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ಆರೋಪಿಗಳ ಮೇಲೆ ಹೇರಲಾಗಿದ್ದರೆ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟಿಸಿದ 13 ಮಂದಿಯ ವಿರುದ್ಧ ಈ ಕಾಯಿದೆ ಹೇರಲಾಗಿದೆ. ಇನ್ನುಳಿದಂತೆ ಗಂಭೀರ ಅಪರಾಧವೆಸಗಿದ 37 ಮಂದಿಯ ವಿರುದ್ಧ ಹಾಗೂ ಇತರ ಅಪರಾಧವೆಸಗಿದ 20 ಮಂದಿಯ ವಿರುದ್ಧ ಈ ಕಾಯಿದೆ ಹೇರಲಾಗಿದೆ.

"ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಅಪರಾಧಗಳು ಹಾಗೂ ಸಮಾಜದಲ್ಲಿ ಭಯ ಸೃಷ್ಟಿಸುವ ಮತ್ತು ಸಾರ್ವಜನಿಕರ ಸುರಕ್ಷತೆಗೆ ಕಂಟಕವಾಗಿರುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಸೂಚಿಸಿದ್ದಾರೆ,.'' ಎಂದು  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಕುಮಾರ್ ಅವಸ್ಥಿ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ದಾಖಲಾದ ಪ್ರಕರಣಗಳ ಹೊರತಾಗಿ ಈ ವರ್ಷ  ಆಗಸ್ಟ್ 26ರ ತನಕ ಉತ್ತರ ಪ್ರದೇಶ ಗೋಹತ್ಯೆ ನಿಷೇಧ ಕಾಯಿದೆಯನ್ವಯ 1,716 ಪ್ರಕರಣಗಳು ದಾಖಲಾಗಿದ್ದು  4,000ಕ್ಕೂ ಅಧಿಕ ಮಂದಿಯನ್ನು ಇಲ್ಲಿಯ ತನಕ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News