ಇಂದು ಅರಣ್ಯ ರಕ್ಷಕರ ಹುತಾತ್ಮ ದಿನ: 2020ರಲ್ಲೆ ಮೂವರ ಹತ್ಯೆ

Update: 2020-09-11 13:41 GMT

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡುವ ಸಂದರ್ಭದಲ್ಲಿ ದೇಶಾದ್ಯಂತ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಯ ಶೌರ್ಯ ಮತ್ತು ಮಾಡಿದ ಅಪ್ರತಿಮ ತ್ಯಾಗಗಳನ್ನು ಸ್ಮರಿಸುವ ಸಲುವಾಗಿ ಪರಿಸರ ಮತ್ತು ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಸೆ. 11ನೇ ದಿನವನ್ನು ‘‘ಅರಣ್ಯ ರಕ್ಷಕರ ಹುತಾತ್ಮ ದಿನ’’ವನ್ನಾಗಿ ಘೋಷಣೆ ಮಾಡಿದೆ.

ಹುತಾತ್ಮರ ಹಿನ್ನೆಲೆ: ಉಪ ಅರಣ್ಯ ಸಂರಕ್ಷಣಾಧಿಕಾರಿ ದಿ.ಪಿ.ಶ್ರೀನಿವಾಸ್ ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರು. ಅವರು ‘‘ಅರಣ್ಯಕ್ಕಾಗಿ ಹುಟ್ಟು, ಅರಣ್ಯಕ್ಕಾಗಿ ಬದುಕು, ಅರಣ್ಯಕ್ಕಾಗಿ ಸಾವು’’ ಎನ್ನುವ ಆದರ್ಶವನ್ನು ಅನುಸರಿಸಿದವರು. ‘‘ಕರ್ನಾಟಕ ಅರಣ್ಯ ಇಲಾಖೆಯ ಅಭಿಮನ್ಯು’’ ಎಂದು ಪ್ರಸಿದ್ಧರಾಗಿದ್ದ ಅವರು, ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನಿಂದ 1991 ನ.10ರಂದು ದಾರುಣವಾಗಿ ಹತ್ಯೆಗೆ ಒಳಗಾದರು. ಈ ದಿನವನ್ನು ಕರ್ನಾಟಕ ಅರಣ್ಯ ಇಲಾಖೆ ಹುತಾತ್ಮ ದಿನವೆಂದು 1992 ರಿಂದ 2012ರವರೆಗೂ ಆಚರಿಸಲಾಗುತ್ತಿತ್ತು. ಆದರೆ, 1730ರ ಸೆ.11ರಂದು ಜೋಧಪುರದ ಮಹಾರಾಜ ಅಭಯಸಿಂಗ್‌ನ ಸೈನಿಕರು ಬಿಕಾನೇರ್ ಪ್ರಾಂತದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಖೇಜಡಿ ಮರಗಳನ್ನು ಕಡಿಯಲು ಹೋದಾಗ ವಿರೋಧಿಸಿದ್ದ ಬಿಷ್ಣೋಯಿ ಸಮುದಾಯದ 363 ಪುರುಷ, ಮಹಿಳೆ ಮತ್ತು ಮಕ್ಕಳನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಯದ ನಿರ್ದೇಶನದ ಮೇರೆಗೆ ಸೆ. 11ರಂದು ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮ ದಿನವೆಂದು ಘೋಷಿಸಿದೆ.

‘ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ತೋರಿದ ಶೌರ್ಯ, ಮಾಡಿದ ಬಲಿದಾನಗಳನ್ನು ಸ್ಮರಿಸುವ ಮತ್ತು ನೆನಪಿಟ್ಟುಕೊಳ್ಳುವ ಸಲುವಾಗಿ, ರಾಜ್ಯದ ಕೇಂದ್ರ ಕಚೇರಿ ಮತ್ತು ಪ್ರತಿ ಜಿಲ್ಲಾ ಕೇಂದ್ರ ಕಚೇರಿಗಳಲ್ಲಿ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ’ ಎಂದು ಬೆಳಗಾವಿ ವೃತ್ತದ ಸಿಎಫ್ ಬಸವರಾಜ ಪಾಟೀಲ್ ಮಾಹಿತಿ ನೀಡಿದರು.

2020ರಲ್ಲೆ ಮೂವರ ಹತ್ಯೆ

ಪರಿಸರ ಮತ್ತು ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಸೆ.11ರಂದು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡುವ ಸಂದರ್ಭದಲ್ಲಿ ದೇಶಾದ್ಯಂತ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಯ ಶೌರ್ಯ ಮತ್ತು ಅಪ್ರತಿಮ ತ್ಯಾಗಗಳನ್ನು ಸ್ಮರಿಸುವ ದಿನವನ್ನಾಗಿ ಘೋಷಣೆ ಮಾಡಿದ್ದು, 2020ರಲ್ಲೇ ಕರ್ನಾಟಕದಲ್ಲಿ ಮೂವರು ಅರಣ್ಯ ರಕ್ಷಕರು ಹುತಾತ್ಮರಾಗಿದ್ದಾರೆ.

2020 ಮೇ 6ರಂದು ಸಾಗರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಳ್ಳರ ದಾಳಿಗೆ ಅರಣ್ಯ ವೀಕ್ಷಕ ಎಂ.ಎಚ್.ನಾಗರಾಜು ದುರ್ಮರಣ, ಎ.24ರಂದೇ ಇಬ್ಬರು ಬಂಡೀಪುರ ವನ್ಯಜೀವಿ ವಿಭಾಗದಲ್ಲಿ ಒಬ್ಬ ಅರಣ್ಯರಕ್ಷಕ ಹಾಗೂ ದಿನಗೂಲಿ ನೌಕರ ಅಕ್ರಮ ಮೀನುಗಾರರಿಂದ ಹತ್ಯೆಗೀಡಾಗಿದ್ದಾರೆ.

ಅರಣ್ಯಕ್ಕಾಗಿ ವೀರ ಬಲಿದಾನ: ಕರ್ನಾಟಕ ಅರಣ್ಯ ಇಲಾಖೆಯ ಅಭಿಮನ್ಯು ಎಂದೇ ಪ್ರಸಿದ್ಧರಾಗಿದ್ದ ದಿವಂಗತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀನಿವಾಸ್. ಅರಣ್ಯಕ್ಕಾಗಿ ಹುಟ್ಟು, ಅರಣ್ಯಕ್ಕಾಗಿ ಬದುಕು, ಅರಣ್ಯಕ್ಕಾಗಿ ಸಾವು ಎನ್ನುವ ಆದರ್ಶವನ್ನು ಅನುಸರಿಸಿಕೊಂಡು ಬಂದಿದ್ದ ಇವರು ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನಿಂದ 1991ರ ನ.10ರಂದು ಧಾರುಣವಾಗಿ ಹತ್ಯೆಯಾದರು. ಇವರು ಸಲ್ಲಿಸಿದ ಸೇವೆಗೆ ಭಾರತ ಸರಕಾರ ಅವರಿಗೆ ಮರಣೋತ್ತರ ಕೀರ್ತಿಚಕ್ರ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿತು. ವೀರಪ್ಪನ್‌ನಿಂದ ಕೊಲೆಗೀಡಾದ ಮತ್ತೋರ್ವ ಅರಣ್ಯರಕ್ಷಕ ಬಿ.ಸಿ. ಮೋಹನಯ್ಯ ಅವರ ಬದ್ಧತೆ ಮತ್ತು ಶೌರ್ಯವನ್ನು ಸ್ಮರಿಸಲಾಗುತ್ತದೆ. ಶಿರಸಿಯ ಮರಗಳ್ಳರಿಂದ ಕೊಲೆಗೀಡಾದ ಅರವಿಂದ ಹೆಗಡೆಯವರ ಅಪ್ರತಿಮ ತ್ಯಾಗವನ್ನು ಸ್ಮರಿಸಲಾಗುತ್ತದೆ.

50 ಅರಣ್ಯಾಧಿಕಾರಿಗಳು ಹುತಾತ್ಮರು: ಆನೆ, ಹುಲಿ, ಚಿರತೆ ಹಾಗೂ ಕಾಡುಗಳ್ಳರ ದಾಳಿಗೆ ಪ್ರತಿ ವರ್ಷ ಒಬ್ಬರು ಅಥವಾ ಇಬ್ಬರು ಅಧಿಕಾರಿಗಳ ಬಲಿದಾನವಾಗುತ್ತಿದೆ. ಕರ್ನಾಟಕದಲ್ಲಿ ಒಟ್ಟಾರೆ ಎಪ್ರಿಲ್ 2020 ರವರೆಗೆ 50 ಅರಣ್ಯ ಅಧಿಕಾರಿಗಳು, ಮುಂಚೂಣಿ ಸಿಬ್ಬಂದಿ

ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಹುತಾತ್ಮ ರಾಗಿದ್ದಾರೆ.

2018ರಲ್ಲಿ ಹುಣಸೂರಿನ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಕ್ಷೇತ್ರ ನಿರ್ದೇಶಕ ಎಸ್.ಮಣಿಕಂಠನ್ ಇವರು ಬೆಂಕಿ ತಡೆ ಕ್ರಮಗಳ ಪರಿಶೀಲನೆ ಮಾಡುತ್ತಿದ್ದಾಗ ಆನೆ ದಾಳಿಯಿಂದ ಆಕಸ್ಮಿಕ ಮರಣಕ್ಕೊಳಗಾದರು. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಅವರು ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಭಾರತ ಸರಕಾರ ಎಸ್. ಮಣಿಕಂಠನ್ ಅವರಿಗೆ ಮರಣೋತ್ತರವಾಗಿ ವಿಶ್ವ ಪರಿಸರ ದಿನದಂದು ಆನೆ ಯೋಧ ಪ್ರಶಸ್ತಿ 2018 ನೀಡಿ ಗೌರವಿಸಲಾಗಿದೆ.

ಅರಣ್ಯ ಹುತಾತ್ಮರ ಸಮಿತಿಯಿಂದ ಆರ್ಥಿಕ ನೆರವು

ಹುತಾತ್ಮರ ಕುಟುಂಬಗಳಿಗೆ ನೆರವು ಒದಗಿಸುವ ಸಲುವಾಗಿ, ಅರಣ್ಯ ಹುತಾತ್ಮರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ವಿವಿಧ ವೃತ್ತಗಳು ಮತ್ತು ಸಂಘ, ಸಂಸ್ಥೆಗಳ ವ್ಯಕ್ತಿಗಳು ದೇಣಿಗೆಗಳನ್ನು ನೀಡುತ್ತಾರೆ. ಸಂಗ್ರಹವಾದ ಹಣವನ್ನು ಹುತಾತ್ಮರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಕ್ಕೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಮತ್ತು ಪ್ರತಿಭಾನ್ವಿತ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಇತ್ಯಾದಿ ಕಾರ್ಯಗಳಿಗೆ ಬಳಸಲಾಗುತ್ತದೆ.

30 ಲಕ್ಷ ಪರಿಹಾರಧನ: ಅರಣ್ಯ ಸಂಪತ್ತಿನ ರಕ್ಷಣೆ ಮಾಡುವಾಗ ದುರದೃಷ್ಟವಶಾತ್ ಕಳ್ಳಕಾಕರ, ವನ್ಯಪ್ರಾಣಿಗಳ ದಾಳಿ ಸಿಲುಕಿ ಹುತಾತ್ಮರಾದವರಿಗೆ ಇಲಾಖೆ ಸಿಬ್ಬಂದಿಯ ಪರಿಹಾರಧನವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ 2019ರಲ್ಲೇ 20 ಲಕ್ಷವಿದ್ದ ಪರಿಹಾರಧನವನ್ನು 30 ಲಕ್ಷ ರೂ. ಹೆಚ್ಚಳಗೊಳಿಸಲು ಆದೇಶ ಹೊರಡಿಸಿದ್ದಾರೆ.

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅಪ್ರತಿಮ ತ್ಯಾಗ ಮಾಡಿದ ಅರಣ್ಯ ಅಧಿಕಾರಿಗಳು ಮತ್ತು ಮುಂಚೂಣಿ ಅರಣ್ಯ ಸಿಬ್ಬಂದಿಯನ್ನು ಅರಣ್ಯ ಹುತಾತ್ಮರ ದಿನದಂದು ಸ್ಮರಿಸಿಕೊಳ್ಳಲಾಗುತ್ತದೆ. ವನ್ಯಜೀವಿ ಮತ್ತು ಅರಣ್ಯಗಳ ಸಂರಕ್ಷಣೆಗಾಗಿ ಅವರು ಮಾಡಿದ ಅಪ್ರತಿಮ ಪ್ರಯತ್ನಗಳು, ಶೌರ್ಯದ ಕಾರ್ಯಗಳು, ಮುಂದಿನ ಜನಾಂಗಕ್ಕೆ ಸ್ಫೂರ್ತಿದಾಯಕವಾಗಿದೆ.

- ಸಂಜಯ್ ಮೋಹನ್, ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ

ಕರ್ನಾಟಕದ ಅರಣ್ಯ ಹುತಾತ್ಮರು…

ಅರಣ್ಯರಕ್ಷಕ: ಶಂಕರ್ ಮೂಡಲಗಿ, ಮಾದಾನಾಯ್ಕ, ಹುಚ್ಚೇಶೆಟ್ಟಿ, ಜೆ.ಐ.ಹಂಪಯ್ಯ, ಎನ್.ಎ. ಬಸರೀಕಟ್ಟ, ಬಿ.ಸಿ. ಮೋಹನಯ್ಯ, ಎಚ್.ಬಸವೆಣ್ಣೆ, ಎಂ.ಆರ್. ಪೂಜಾರಿ, ಕೆ.ಎಸ್. ವಿಠ್ಠಲ್, ಎಲ್. ಲೋಕೇಶ್, ಪಿ.ಎ.ಪೊನ್ನಪ್ಪ, ಅಣ್ಣಪ್ಪ ಮಲ್ಲಪ್ಪ ಮುಗಳ ಖೋಡ, ಕಾಳೇಗೌಡ, ಎಂ. ರಾಜಶೇಖರಪ್ಪ, ಮಂಜುನಾಥಪ್ಪ, ಮುರುಗೆಪ್ಪ ತಮ್ಮನ ಗೊಳ್.

ಅರಣ್ಯ ವೀಕ್ಷಕ: ಕೆ.ಎಂ. ಪೃಥಕುಮಾರ್, ಶ್ರೀನಿವಾಸಯ್ಯ, ವೀರಭದ್ರಪ್ಪ, ಎಚ್.ಸಿ.ನಾರಾಯಣ್, ಪಂಚಲಿಂಗಯ್ಯ, ದೊಡ್ಡಶೆಟ್ಟಿ, ಕೆ.ಆರ್ ಮಹೇಶ್, ಹಲಗ.

ವನಪಾಲಕ: ಜೋಗೇಗೌಡ, ಅಬ್ದುಲ್‌ಅಹ್ಮದ್, ಅಹ್ಮದ್‌ಖಾನ್, ಬಿ.ಡಿ. ಖಾನಾಪುರಿ, ವೈ.ಹನುಮಂತಪ್ಪ, ಪ್ರಭಾಕರ್ ಬಿ.

ವಲಯ ಅರಣ್ಯಾಧಿಕಾರಿ: ಕೆ.ಎನ್. ರಂಗರಾಜರಸ್, ಎಚ್.ಎ. ಹನುಮಂತಪ್ಪ, ಅರವಿಂದ ಡಿ.ಹೆಗ್ಡೆ, ಎಂ.ವಿ. ರಂಗನಗೌಡರ್. ಉಪ ಅರಣ್ಯ ಸಂರಕ್ಷಣಾಧಿಕಾರಿ: ಪಿ.ಶ್ರೀನಿವಾಸ್.

ಸಹಾಯಕಅರಣ್ಯ ಸಂರಕ್ಷಣಾಧಿಕಾರಿ: ಎಂ.ಎಚ್.ನಾಯಕ.

ದಿನಗೂಲಿ ನೌಕರ: ಎಸ್.ಟಿ.ಗಣೇಶ್, ದಬ್ಬಣ್ಣ, ರಾಮಯ್ಯ, ಮಹದೇವ, ಹಲಗ, ಶಿವಕುಮಾರ್.

ಸಹಾಯಕ ಪಶು ವೈದ್ಯ ನಿರ್ದೇಶಕ: ಡಾ.ಜಿ.ಕೆ.ವಿಶ್ವನಾಥ್

ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ: ಎಸ್.ಮಣಿಂದನ್

ಕ್ಷೇಮಾಭಿವೃದ್ಧಿ ನೌಕರ ಮತ್ತು ಅರಣ್ಯ ವೀಕ್ಷಕ: ಚಿಕ್ಕೀರಯ್ಯ, ಎನ್.ಎಲ್.ಅಣ್ಣೇಗೌಡ, ಎಂ.ಹೆಚ್.ನಾಗರಾಜ್.

ಅರಣ್ಯ ವೀಕ್ಷಕ: ಎಂ.ಮಹೇಶ್

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News