ಕೊರೋನ: ಅಮೆರಿಕನ್ನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆದ ಟ್ರಂಪ್: ಕಮಲಾ ಹ್ಯಾರಿಸ್ ಆರೋಪ

Update: 2020-09-11 16:37 GMT

ವಾಶಿಂಗ್ಟನ್, ಸೆ. 11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನ ವೈರಸ್ ವಿಷಯದಲ್ಲಿ ಅಮೆರಿಕನ್ನರನ್ನು ‘ಉದ್ದೇಶಪೂರ್ವಕವಾಗಿ’ ತಪ್ಪುದಾರಿಗೆ ಎಳೆದಿದ್ದಾರೆ ಎಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಆರೋಪಿಸಿದ್ದಾರೆ.

ಅಮೆರಿಕದ ಪತ್ರಕರ್ತ ಬಾಬ್ ವುಡ್‌ವಾರ್ಡ್ ಬರೆದಿರುವ ಪುಸ್ತಕ ‘ರೇಜ್’ನ್ನು ಉಲ್ಲೇಖಿಸಿ ಅವರು ಈ ಆರೋಪ ಮಾಡಿದ್ದಾರೆ. ಕೊರೋನ ವೈರಸ್ ಬಗ್ಗೆ ಟ್ರಂಪ್ ನೀಡಿರುವ ಹೇಳಿಕೆಗಳು ಈ ಪುಸ್ತಕದಲ್ಲಿವೆ ಎನ್ನಲಾಗಿದೆ. ಪುಸ್ತಕವು ಸೆಪ್ಟಂಬರ್ 15ರಂದು ಬಿಡುಗಡೆಯಾಗಲಿದೆ.

 ಟ್ರಂಪ್‌ರ ಅಧ್ಯಕ್ಷೀಯ ಅವಧಿಯಲ್ಲಿ ನಡೆದಿದೆಯೆನ್ನಲಾದ ಹಲವು ಹಗರಣಗಳ ಬಗ್ಗೆ ಅವರ ಪುಸ್ತಕವು ಬೆಳಕು ಚೆಲ್ಲಿದೆಯೆನ್ನಲಾಗಿದೆ. ಕೊರೋನ ವೈರಸ್ ಬೆದರಿಕೆಯನ್ನು ತಾನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ ಎಂಬುದಾಗಿ ಟ್ರಂಪ್ ಹಲವು ಸಂದರ್ಶನಗಳಲ್ಲಿ ನನ್ನೊಂದಿಗೆ ಹೇಳಿದ್ದಾರೆ ಎಂದು ವುಡ್‌ವಾರ್ಡ್ ತನ್ನ ಪುಸ್ತಕದಲ್ಲಿ ಹೇಳಿದ್ದಾರೆ.

ಟ್ರಂಪ್‌ರ ಹೇಳಿಕೆಗಳಿಗೆ ಗುರುವಾರ ಪ್ರತಿಕ್ರಿಯಿಸಿರುವ ಭಾರತೀಯ ಅಮೆರಿಕನ್ ಕಮಲಾ ಹ್ಯಾರಿಸ್, ‘‘ಅವರು (ಟ್ರಂಪ್) ಉದ್ದೇಶಪೂರ್ವಕವಾಗಿ ಅಮೆರಿಕದ ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ. ಸಾಂಕ್ರಾಮಿಕದ ಗಂಭೀರತೆಯನ್ನು ಒಪ್ಪಿಕೊಂಡರೆ ಅದು ತನ್ನನ್ನು ಕೆಟ್ಟದಾಗಿ ಬಿಂಬಿಸುತ್ತದೆ ಎಂಬ ಕಾರಣಕ್ಕಾಗಿ ಅವರು ಹಾಗೆ ಮಾಡಿದ್ದಾರೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News