ಕಪಿಮುಷ್ಟಿಯಲ್ಲಿ ಕಾಲೇಜು ಶಿಕ್ಷಣ

Update: 2020-09-11 19:30 GMT

ಶಿಕ್ಷಣ ವ್ಯವಸ್ಥೆಯ ಈ ಆತಂಕಕಾರಿ ಪಲ್ಲಟದಲ್ಲಿ ಕಾಲೇಜು ಪದವಿ ಶಿಕ್ಷಣದ ಗತಿಯೇನು? ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ವಿದಾಯ ಹೇಳಿದಲ್ಲಿ ಆ ಖಾಸಗಿ ಅನುದಾನ ರಹಿತ ಕಾಲೇಜು ಆಡಳಿತ ಮಂಡಳಿಗಳ ಆರ್ಥಿಕ ಪರಿಸ್ಥಿತಿ, ಹಣಕಾಸಿನ ಮುಗ್ಗಟ್ಟು ಗಂಭೀರವಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪದವಿ ಕಾಲೇಜುಗಳು ಕಲಾ ವಿಭಾಗ, ವಾಣಿಜ್ಯ ಹಾಗೂ ವಿಜ್ಞಾನ ಕೋರ್ಸ್‌ಗಳಿಗೆ ವರ್ಷವೊಂದರ 20,000ದಿಂದ 30,000 ರೂ.ವರೆಗೆ ಶುಲ್ಕ ಪಡೆಯುತ್ತವೆ. 2,000 ವಿದ್ಯಾರ್ಥಿಗಳಿರುವ ಒಂದು ಶಿಕ್ಷಣ ಸಂಸ್ಥೆಯಲ್ಲಿ 600-700 ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಲ್ಲಿ ಶಿಕ್ಷಕರಿಗೆ ವೇತನ ನೀಡುವುದು ಹೇಗೆ? ಇಂತಹ ಹತ್ತಾರು ಪ್ರಶ್ನೆಗಳ ಸುಳಿಯಲ್ಲಿ ಸಿಕ್ಕಿರುವ ಕಾಲೇಜು ಶಿಕ್ಷಣದ, ಕಾಲೇಜು ಶಿಕ್ಷಕರ ಭವಿಷ್ಯ ಏನು? ಸದ್ಯಕ್ಕೆ ಇದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.


ಬಾಂಬ್ ಸ್ಫೋಟವಾದ ಅಥವಾ ವಿಷಾನಿಲ ಸಿಲಿಂಡರ್ ಸೋರಿಕೆಯಾದಾಗ ಭೀತರಾದ ಜನ ಪ್ರಾಣ ಉಳಿಸಿಕೊಳ್ಳಲು ಓಡಿ ಸುರಕ್ಷಿತ ಜಾಗದಲ್ಲಿ ಅವಿತುಕೊಳ್ಳುವಂತೆ ಕೊರೋನ ಸೋಂಕು ಹೆದರಿಕೆಗೆ ಬೆದರಿದ ಜನ ಸಾರ್ವಜನಿಕ ಸ್ಥಳಗಳಿಗೆ ಬರುವ ಧೈರ್ಯ ಮಾಡದೆ ತಮ್ಮ ತಮ್ಮ ಮನೆಗಳಲ್ಲಿ ಬಂದಿಗಳಾಗಿ ಕುಳಿತಿದ್ದಾರೆ. ಇಲೆಕ್ಟ್ರಾನಿಕ್ ಮಾಧ್ಯಮಗಳು ಹಾಗೂ ವಾರ್ತಾಪತ್ರಿಕೆಗಳು ಕಳೆದ ಕೆಲವು ತಿಂಗಳುಗಳಲ್ಲಿ ಕೇರಳಕ್ಕೆ ಸಂಬಂಧಿಸಿ ಬಿತ್ತರಿಸಿದ ವಾರ್ತೆಗಳು, ಮೃತರ ಹಾಗೂ ಸೋಂಕಿತರ ಅಂಕಿ-ಸಂಖ್ಯೆಗಳು, ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ಭಯಾನಕ ವಿವರಗಳು ಆ ವ್ಯಕ್ತಿಯ ಕುಟುಂಬದ ಸದಸ್ಯರು ಪಟ್ಟ ಪಡಬಾರದ ಪಾಡಿನ ಕಥಾನಕಗಳು ಸಾರ್ವಜನಿಕರನ್ನು ಎಷ್ಟರ ಮಟ್ಟಿಗೆ ಬೆಚ್ಚಿ ಬೀಳಿಸಿದವೆಂದರೆ ಅನಿವಾರ್ಯವಾಗಿ ಮನೆಯಿಂದ ಹೊರಗೆ ಮಾಲ್‌ಗಳಿಗೆ, ಮಾರುಕಟ್ಟೆಗೆ ಬರುವಾಗ ಕೂಡ ಪೋಷಕರು ಮಕ್ಕಳನ್ನು ತಮ್ಮ ಜೊತೆ ಕರೆತರುತ್ತಿಲ್ಲ.

ಕಳೆದ ಒಂದು ಶತಮಾನದಲ್ಲಿ ಈ ಮಟ್ಟದ ಭಯ ಜನರನ್ನು ಕಾಡಿರಲಾರದು. ಕೊರೋನ ಭಯ ಜನರ ದೈನಂದಿನ ಬದುಕಿನಲ್ಲಿ ಸಮಾಜದ ಹಲವು ಸ್ತರಗಳಲ್ಲಿ ಉದ್ಯೋಗ, ಮಾರುಕಟ್ಟೆ, ಆರೋಗ್ಯ, ವಾಣಿಜ್ಯ ಹಾಗೂ ಶಿಕ್ಷಣದ ಮೇಲೆ ಊಹಾತೀತವಾದ ಪರಿಣಾಮ ಬೀರಿದೆ. ಉಡುಪಿಯಂತಹ ಪ್ರವಾಸೋದ್ಯಮ, ಪುಣ್ಯಕ್ಷೇತ್ರ ನಗರ ಕೂಡ ತನ್ನ ಎಂದಿನ ಆಕರ್ಷಣೆ ಕಳೆದುಕೊಂಡು ಪೇಲವವಾಗಿದೆ. ಮಧ್ಯಮ, ಮೇಲ್ಮಧ್ಯಮ ವರ್ಗದ ಗಿರಾಕಿಗಳಿಂದ ತುಂಬಿರುತ್ತಿದ್ದ ಡಿಲಕ್ಸ್ ಮಾದರಿಯ ಹೊಟೇಲ್‌ಗಳಲ್ಲಿ ಕೆಲವು ಹೊಟೇಲ್‌ಗಳು ಲಾಕ್‌ಡೌನ್ ಅವಧಿಯಲ್ಲಿ ಮುಚ್ಚಿ, ಬಳಿಕ ತೆರೆದು ಗಿರಾಕಿಗಳಿಲ್ಲದೇ ಪುನಃ ಮುಚ್ಚಿದವು. ಮಧ್ಯಾಹ್ನ ಮತ್ತು ಸಂಜೆಯ ವೇಳೆ ಸುಮಾರು ನೂರ ಇಪ್ಪತ್ತು ಗಿರಾಕಿಗಳು ಇರುತ್ತಿದ್ದ ರೆಸ್ಟೋರೆಂಟ್ ಒಂದರಲ್ಲಿ ಈಗ ‘ಪೀಕ್ ಟೈಮ್’ನಲ್ಲಿ ಆರೇಳು ಮಂದಿ ಗಿರಾಕಿಗಳಿರುತ್ತಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮದಲ್ಲಿದ್ದ ಸುಮಾರು ಎರಡೂವರೆ ಲಕ್ಷ ಮಂದಿ ಕೊರೋನದಿಂದಾಗಿ ನೌಕರಿ ಕಳೆದುಕೊಂಡಿದ್ದರೆ, ಉಡುಪಿ ನಗರವೊಂದರಲ್ಲೇ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೆಲವು ನೂರು ಮಂದಿ ಬೀದಿಗೆ ಬಿದ್ದಿದ್ದಾರೆ.

ಈ ಎಲ್ಲ ಪರಿಣಾಮಗಳು ಒಂದೆಡೆಯಾದರೆ ಕೊರೋನವನ್ನೇ ಜನರ ಸುಲಿಗೆಗೆ ಒಂದು ಮಾರ್ಗವಾಗಿ ಬಳಸಿಕೊಂಡ ಆರೋಗ್ಯ, ಶಿಕ್ಷಣ ರಂಗದ ಸಂಸ್ಥೆಗಳು ಇನ್ನೊಂದೆಡೆ ಇವೆ. ಉದಾಹರಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯೊಂದು ಲಾಕ್‌ಡೌನ್ ಘೋಷಣೆಯಾದ ಮುಂದಿನ ತಿಂಗಳಿನಿಂದಲೇ ಸಂಸ್ಥೆಯ ಸಿಬ್ಬಂದಿಗೆ ಶೇ. 50ರಷ್ಟು ವೇತನ ಕಡಿತ ಮಾಡಿ ವೇತನದ ಅರ್ಧದಷ್ಟನ್ನು ಮಾತ್ರ ನೀಡುತ್ತಿದೆ. ಡಝನುಗಟ್ಟಲೆ ಶಾಲಾ ವಾಹನಗಳನ್ನು ಹೊಂದಿ ವಾರ್ಷಿಕ ಹತ್ತಾರು ಕೋಟಿ ವ್ಯವಹಾರ ನಡೆಸುವ ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಶಿಕ್ಷಣದವರೆಗಿನ ತರಗತಿಗಳನ್ನು ನಡೆಸುವ ಸಂಸ್ಥೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆಗುವ ಅಡ್ಮಿಶನ್‌ಗಳನ್ನು ನೋಡಿಕೊಂಡು ಎಷ್ಟು ವೇತನ ನೀಡಬಹುದೆಂದು ನಿರ್ಧರಿಸುತ್ತೇವೆ ಎಂದು ಹೇಳಿದೆ. ಆದರೆ ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ. ಮೊದಲನೆಯದಾಗಿ, ಇಂತಹ ಸಂಸ್ಥೆಗಳಲ್ಲಿ ಹೊಸ ಅಡ್ಮಿಶನ್ ಗಳಾಗುವುದು ಪ್ರತಿ ಹಂತದ ಮೊದಲನೇ ವರ್ಷದ ತರಗತಿಗಳಿಗೆ ಮಾತ್ರ. ಅಂದರೆ ಕೆಜಿಯಿಂದ ಪದವಿ ತರಗತಿಯವರೆಗಿನ ಕೋರ್ಸುಗಳಲ್ಲಿ ಹೆಚ್ಚೆಂದರೆ ನಾಲ್ಕು ಹಂತಗಳ ಮೊದಲ ವರ್ಷದ ತರಗತಿಗಳಿಗೆ ಮಾತ್ರ. ಇದು ಸುಮಾರು 1,500ರಿಂದ 2,000 ವಿದ್ಯಾರ್ಥಿಗಳಿರುವ ಒಂದು ಸಂಸ್ಥೆಯಲ್ಲಿ ಹೆಚ್ಚೆಂದರೆ 400ರಿಂದ 500 ಇರಬಹುದು. ಆದರೆ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಈ ಶೈಕ್ಷಣಿಕ ವರ್ಷದ ಶುಲ್ಕ ತೆಗೆದುಕೊಳ್ಳಲು ಅನುಮತಿ ನೀಡಿದ ಕೂಡಲೇ ಇವುಗಳು ಮಕ್ಕಳ ಪೋಷಕರಿಗೆ ಫೋನಾಯಿಸಿ, ಕೊರೋನ ಭಯವಿದ್ದಲ್ಲಿ ಆನ್‌ಲೈನ್‌ನಲ್ಲಿ, ಇಲ್ಲವಾದಲ್ಲಿ ಸಂಸ್ಥೆಗೆ ಬಂದು ಪಾವತಿಸುವಂತೆ ಹೇಳಿ ಪೂರ್ತಿ ಶುಲ್ಕ ವಸೂಲಿ ಮಾಡಿವೆ. ಇದಕ್ಕೆ ಪ್ರತಿಫಲವಾಗಿ ಸರಕಾರದ ಆದೇಶಕ್ಕೆ ವಿನೀತರಾಗಿ ತಲೆಬಾಗಿ ಸಂತೋಷದಿಂದ ಆನ್‌ಲೈನ್ ತರಗತಿ ನಡೆಸುತ್ತಿವೆ.

ಎರಡನೆಯದಾಗಿ, ಖಾಸಗಿ ಅನುದಾನರಹಿತ ಪದವಿ ಕಾಲೇಜುಗಳಿಗೆ ಬಂದರೆ ಅಲ್ಲಿ ಶಿಕ್ಷಕ ವೃಂದದ ದೃಷ್ಟಿಯಿಂದ ಇನ್ನಷ್ಟು ಶೋಚನೀಯ ಸ್ಥಿತಿ ಕಾಣಿಸುತ್ತದೆ. ಕೊರೋನ ಕಪಿಮುಷ್ಟಿಯಲ್ಲಿ ಸಿಲುಕಿರುವ ಕಾಲೇಜು ಶಿಕ್ಷಣದ ಮತ್ತು ಅದರ ಜೊತೆಗೆ ನಿರುದ್ಯೋಗಿಗಳಾಗುವ ಹಾಲಿ ಶಿಕ್ಷಕರ ಹಾಗೂ ಸ್ನಾತಕೋತ್ತರ ಪದವೀಧರರ ಭವಿಷ್ಯ ಏನು ಎಂಬ ಪ್ರಶ್ನೆ ಭೂತಾಕಾರವಾಗಿ ನಮ್ಮ ಮುಂದೆ ಎದ್ದು ನಿಲ್ಲುತ್ತದೆ. ಒಂದು ಖಾಸಗಿ ಪದವಿ ಕಾಲೇಜಿನಲ್ಲಿರುವ ಸುಮಾರು ನೂರಮೂವತ್ತು ಶಿಕ್ಷಕರಲ್ಲಿ 10-15 ಮಂದಿಯನ್ನು ಹೊರತುಪಡಿಸಿದರೆ ಉಳಿದವರೆಲ್ಲ ಅನುದಾನ ರಹಿತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು. ಲಾಕ್‌ಡೌನ್ ಘೋಷಣೆಯಾದ ಮುಂದಿನ ತಿಂಗಳುಗಳಲ್ಲಿ ಇವರಲ್ಲಿ, ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸಿ ಮಾಸಿಕ 40,000 ರೂಪಾಯಿ ವೇತನ (ಈಗ ತುಂಬಾ ದೊಡ್ಡ ವೇತನ!) ಪಡೆಯುತ್ತಿರುವವರಿಗೆ ಅವರ ವೇತನದ ಶೇ.25ನ್ನಷ್ಟೇ ನೀಡಲಾಯಿತು. ಮಾಸಿಕ 20,000ಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವವರ ಮೇಲೆ ಆಡಳಿತ ಮಂಡಳಿ ಕರುಣೆ ತೋರಿ ಅವರ ವೇತನದ ಶೇ.50ರಷ್ಟನ್ನು ನೀಡಿತು. (ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ಅನುದಾನಿತ ಹುದ್ದೆಯಲ್ಲಿರುವ ಅದೇ ಸಂಸ್ಥೆಯ ಅಧ್ಯಾಪಕರು ಮಾಸಿಕ ರೂಪಾಯಿ 2 ಲಕ್ಷಕ್ಕಿಂತಲೂ ಹೆಚ್ಚು ವೇತನ ಪಡೆಯುತ್ತಾರೆ ಎಂದರೆ ಹಲವರಿಗೆ ಲಘು ಹೃದಯಾಘಾತ ಆಗದೇ ಇರದು!)

ಆಡಳಿತ ಮಂಡಳಿಯ ನಿರ್ಧಾರಕ್ಕೆ ಕೊರೋನ ಭಯ ಸಮರ್ಥನೆ ನೀಡುವಂತಿದೆ. ಕೊರೋನ ಉಂಟು ಮಾಡಿದ ನಿರುದ್ಯೋಗದ ಮಹಾ ಭಯ ವಿದ್ಯಾರ್ಥಿಗಳ ಮುಂದಿನ ಹಂತದ ಕೋರ್ಸ್ ಗಳ ಆಯ್ಕೆಯ ಮೇಲೆ ಕೂಡ ಗಂಭೀರ ಸ್ವರೂಪದ ಪರಿಣಾಮ ಬೀರಿದೆ. ಉದಾಹರಣೆಗೆ, ಕಳೆದ ವರ್ಷದವರೆಗೆ ತರಗತಿಯೊಂದರ ಸುಮಾರು 80 ವಿದ್ಯಾರ್ಥಿಗಳಂತೆ ಆರು ಸೆಕ್ಷನ್‌ಗಳನ್ನು ಹೊಂದಿದ್ದ ಕಾಮರ್ಸ್ ಪದವಿಯ ಮೊದಲ ವರ್ಷಕ್ಕೆ ಒಟ್ಟು ಸುಮಾರು 180 ವಿದ್ಯಾರ್ಥಿಗಳಷ್ಟೇ ಈ ವರ್ಷ ಸೇರ್ಪಡೆಗೊಂಡಿದ್ದಾರೆ. ಸಾಮಾನ್ಯವಾಗಿ ಯಾರಿಗೂ ಬೇಡವಾಗಿರುವ ಬಿಎ ಪದವಿ ಕೋರ್ಸ್‌ಗೆ 40 ವಿದ್ಯಾರ್ಥಿಗಳು ಬರುತ್ತಿದ್ದ ಕಾಲೇಜಿನಲ್ಲಿ ಈ ವರ್ಷ ಕೇವಲ ಎಂಟು ವಿದ್ಯಾರ್ಥಿಗಳು (ಶೇ. 20) ಮಾತ್ರ ಸೇರ್ಪಡೆಗೊಂಡಿದ್ದಾರೆ. ಕಂಪ್ಯೂಟರ್ ಪದವಿ ಕೋರ್ಸಿಗೆ ಮಾತ್ರ ಎರಡು ಸೆಕ್ಷನ್‌ಗಳಿಗೆ ತಲಾ ನಲವತ್ತು ಮಂದಿ ಭರ್ತಿಯಾಗಿದ್ದಾರೆ. ಹಾಗಾದರೆ ಇಷ್ಟೊಂದು ಸಂಖ್ಯೆ ಯಲ್ಲಿ (ಕಂಪ್ಯೂಟರೇತರ) ಕೋರ್ಸ್‌ಗಳಿಗೆ ಸೇರಿಕೊಳ್ಳಲು ಹಿಂದೇಟು ಹಾಕಿರುವ ಸಾವಿರಾರು ವಿದ್ಯಾರ್ಥಿಗಳು ಎಲ್ಲಿಗೆ ಹೋಗುತ್ತಾರೆ? ಏನು ಮಾಡುತ್ತಾರೆ?
  
ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳುವಂತೆ ಆ ವಿದ್ಯಾರ್ಥಿಗಳೆಲ್ಲ ಪದವಿ ಯಾರಿಗೆ ಬೇಕು, ಉದ್ಯೋಗ ಸಿಕ್ಕಿದರೆ ಸಾಕು ಎಂದುಕೊಂಡು ಕಡಿಮೆ ವೇತನದ್ದಾದರೂ ಸರಿಯೇ, ಮೊದಲು ಒಂದು ನೌಕರಿ ದೊರಕಿಸಿ ಕೊಡುವ ಯಾವುದಾದರೂ ತಾಂತ್ರಿಕ ಕೋರ್ಸ್ ಗಳಿಗೆ ಸೇರಿಕೊಳ್ಳುತ್ತಿದ್ದಾರೆ. ವೈದ್ಯಕೀಯಕ್ಕೆ ಸಂಬಂಧಿಸಿದ ಹತ್ತಾರು ರೀತಿಯ ಪ್ಯಾರಾ ಮೆಡಿಕಲ್ ಕೋರ್ಸ್‌ಗಳನ್ನು, ತಾಂತ್ರಿಕ ವಿಷಯಗಳಲ್ಲಿ ಹಲವು ರೀತಿಯ ಸರ್ಟಿಫಿಕೇಟ್‌ಗಳನ್ನು/ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂತಹ ವಿದ್ಯಾರ್ಥಿಗಳ ಆಗಮನಕ್ಕಾಗಿ ಬಾಯಿ ತೆರೆದು ಕುಳಿತಿವೆ. ಕೊರೋನ ಹೆಮ್ಮಾರಿಯ ಭಯದಿಂದಾಗಿ ದೇಶದ ತಥಾಕಥಿತ ನೂರೈವತ್ತಕ್ಕೂ ಹೆಚ್ಚು ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜುಗಳು ಬಾಗಿಲು ಮುಚ್ಚಿವೆ ಎಂಬ ವರದಿಯ ಹಿನ್ನೆಲೆಯಲ್ಲಿ, ನೌಕರಿ ಸಿಕ್ಕಿತೋ ಇಲ್ಲವೋ ಎಂಬ ಆತಂಕ, ಅದರಿಂದಾಗಿ ತಾಂತ್ರಿಕ ಡಿಪ್ಲೊಮಾ ಕೋರ್ಸ್‌ಗಳಿಗೆ ನೂಕು ನುಗ್ಗಲು ಸಹಜ.

ಆದರೆ ಶಿಕ್ಷಣ ವ್ಯವಸ್ಥೆಯ ಈ ಆತಂಕಕಾರಿ ಪಲ್ಲಟದಲ್ಲಿ ಕಾಲೇಜು ಪದವಿ ಶಿಕ್ಷಣದ ಗತಿಯೇನು? ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ವಿದಾಯ ಹೇಳಿದಲ್ಲಿ ಆ ಖಾಸಗಿ ಅನುದಾನ ರಹಿತ ಕಾಲೇಜು ಆಡಳಿತ ಮಂಡಳಿಗಳ ಆರ್ಥಿಕ ಪರಿಸ್ಥಿತಿ, ಹಣಕಾಸಿನ ಮುಗ್ಗಟ್ಟು ಗಂಭೀರವಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪದವಿ ಕಾಲೇಜುಗಳು ಕಲಾ ವಿಭಾಗ, ವಾಣಿಜ್ಯ ಹಾಗೂ ವಿಜ್ಞಾನ ಕೋರ್ಸ್ ಗಳಿಗೆ ವರ್ಷವೊಂದರ 20,000ದಿಂದ 30,000 ರೂ.ವರೆಗೆ ಶುಲ್ಕ ಪಡೆಯುತ್ತವೆ. 2,000 ವಿದ್ಯಾರ್ಥಿಗಳಿರುವ ಒಂದು ಶಿಕ್ಷಣ ಸಂಸ್ಥೆಯಲ್ಲಿ 600-700 ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಲ್ಲಿ ಶಿಕ್ಷಕರಿಗೆ ವೇತನ ನೀಡುವುದು ಹೇಗೆ? ಇಂತಹ ಹತ್ತಾರು ಪ್ರಶ್ನೆಗಳ ಸುಳಿಯಲ್ಲಿ ಸಿಕ್ಕಿರುವ ಕಾಲೇಜು ಶಿಕ್ಷಣದ, ಕಾಲೇಜು ಶಿಕ್ಷಕರ ಭವಿಷ್ಯ ಏನು? ಸದ್ಯಕ್ಕೆ ಇದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

bhaskarrao599@gmail.com

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News