ಸ್ವಾಮಿ ಅಗ್ನಿವೇಶ್ ಸಾವನ್ನು ಸಂಭ್ರಮಿಸಿ ಟ್ವೀಟ್ ಮಾಡಿದ ಸಿಬಿಐ ಮಾಜಿ ನಿರ್ದೇಶಕ ನಾಗೇಶ್ವರ ರಾವ್

Update: 2020-09-12 07:48 GMT

ಹೊಸದಿಲ್ಲಿ : ಶುಕ್ರವಾರ ನಿಧನರಾದ ಹಿರಿಯ ಸಾಮಾಜಿಕ ಹೋರಾಟಗಾರ ಹಾಗೂ ಆರ್ಯ ಸಮಾಜ ನಾಯಕ ಸ್ವಾಮಿ ಅಗ್ನಿವೇಶ್ ಅವರ ಸಾವನ್ನು ಸಂಭ್ರಮಿಸಿ ಟ್ವೀಟ್ ಮಾಡಿ ಸಿಬಿಐ ಮಾಜಿ ನಿರ್ದೇಶಕ  ನಾಗೇಶ್ವರ ರಾವ್  ವಿವಾದ ಸೃಷ್ಟಿಸಿದ್ದಾರೆ.

“ಸ್ವಾಮಿಅಗ್ನಿವೇಶ್ ತೊಲಗಿರುವುದು ಒಳ್ಳೆಯದಾಯಿತು. ನೀವು  ಕೇಸರಿ ವಸ್ತ್ರಧಾರಿಯಾಗಿದ್ದರೂ ಹಿಂದು ವಿರೋಧಿಯಾಗಿದ್ದವರು.  ನೀವು ಹಿಂದು ಧರ್ಮಕ್ಕೆ ಸಾಕಷ್ಟು ಹಾನಿಯೆಸಗಿದ್ದೀರಿ. ನೀವು ತೆಲುಗು ಬ್ರಾಹ್ಮಣರಾಗಿ ಹುಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತದೆ. ಕುರಿಯ ವೇಷದಲ್ಲಿರುವ ತೋಳದಂತೆ. ಇಷ್ಟು ಸಮಯ ಏಕೆ ಕಾದಿದ್ದೀರಿ ಎಂಬುದೇ ಯಮರಾಜರ ವಿರುದ್ಧ ನನ್ನ ಆಕ್ಷೇಪ'' ಎಂದು ರಾವ್ ಟ್ವೀಟ್ ಮಾಡಿದ್ದರು.

ಅವರ ಈ ಟ್ವೀಟ್ ಇದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರೂ ಈ ನಿವೃತ್ತ ಐಪಿಎಸ್ ಅಧಿಕಾರಿ ಮಾತ್ರ ತಮ್ಮ ನಿಲುವಿನಿಂದ ಕದಡಿಲ್ಲ. ತಮ್ಮ ಒಂದು ಟೀಕೆಗೆ ಪ್ರತಿಕ್ರಿಯಿಸಿದ ಅವರು, “ದುಷ್ಟರು ಸತ್ತ ದಿನವನ್ನು ನಾವು ಹಬ್ಬಗಳೆಂದು ಏಕೆ ಆಚರಿಸುತ್ತೇವೆ? ಏಕೆಂದರೆ ಅವರು ಸಮಾಜವನ್ನು ನಾಶಗೈಯ್ಯುತ್ತಿರುವ ಕ್ರಿಮಿಗಳಂತೆ ಹಾಗೂ ಅವರ ಸಾವು  ಸಂಭ್ರಮಾಚರಣೆಗೆ ಒಂದು ಕಾರಣ'' ಎಂದು  ಬರೆದಿದ್ದಾರೆ.

ನಿಧನರಾದವರ ಆತ್ಮಕ್ಕೆ  ಪ್ರಾರ್ಥಿಸಬೇಕೆಂದು ಎಲ್ಲಾ ಧರ್ಮಗಳೂ ಕರೆ ನೀಡುತ್ತವೆ ಎಂದು ಒಬ್ಬರು ಈ ಮಾಜಿ ಐಪಿಎಸ್ ಅಧಿಕಾರಿಗೆ ನೆನಪಿಸಿದಾಗ ಹಾಗೂ ಇನ್ನೊಬ್ಬರು ಅವರ ಟೀಕೆಗಳಿಗೆ ಅಸಮ್ಮತಿ ವ್ಯಕ್ತಪಡಿಸಿದಾಗ ರಾವ್ ಮಾತ್ರ, “ಹಿಂದುತ್ವವೆಂದರೆ ನಂಬಿಕೆಯಲ್ಲ, ಅದು ಧರ್ಮ. ಹಿಂದು ಧರ್ಮ ಅಂಧಶ್ರದ್ಧೆಯ ವಿರುದ್ಧವಾಗಿದೆ. ಅಧರ್ಮೀಯರನ್ನು ಸಂಹರಿಸಲು ವಿಷ್ಣು ಒಂಬತ್ತು ಅವತಾರಗಳನ್ನು ಎತ್ತಿದ್ದ. ಇದನ್ನು ನಾವು ಹಬ್ಬಗಳೆಂದು ಆಚರಿಸುತ್ತೇವೆ. ಈ ಹಬ್ಬಗಳು ಹೇಟ್ ವೈರಸ್‍ ಗಳೇ?'' ಎಂದು ರಾವ್ ಪ್ರಶ್ನಿಸಿದ್ದಾರೆ.

ನಾಗೇಶ್ವರ ರಾವ್ ಅವರ ಈ ಟ್ವೀಟ್ ಗಳ ವಿರುದ್ಧ ಟ್ವಿಟರಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವನ್ನು ಸಂಭ್ರಮಿಸುವ ಅವರ ಮನಸ್ಥಿತಿಯನ್ನು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News