2.10 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ: ರಾಹುಲ್ ಆರೋಪಕ್ಕೆ ಧ್ವನಿಗೂಡಿಸಿದ ಸಚಿನ್ ಪೈಲಟ್
ಜೈಪುರ, ಸೆ.12: "ಕೈಗಾರಿಕೆಗಳು ಸ್ಥಗಿತಗೊಳ್ಳುತ್ತಿರುವುದರಿಂದ ದೇಶದ ಆರ್ಥಿಕ ಸನ್ನಿವೇಶವು ಕಠೋರವಾಗಿದೆ ಹಾಗೂ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಎತ್ತಿರುವ ವಿಷಯಗಳು ಸಮರ್ಥನೀಯ'' ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
"ರಾಹುಲ್ ಗಾಂಧೀಜಿ ಎತ್ತಿರುವ ವಿಷಯಗಳು ಸಮರ್ಥನೀಯ. ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಕೈಗಾರಿಕೆಗಳು ಸ್ಥಗಿತಗೊಳ್ಳುತ್ತಿವೆ. 2.10 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಂಬಳ ಕಡಿತಗೊಳಿಸಲಾಗುತ್ತಿದೆ. ಮತ್ತೊಂದೆಡೆ ಚೀನಾ ನಮ್ಮ ಪ್ರದೇಶವನ್ನು ಪ್ರವೇಶಿಸುತ್ತಿದೆ'' ಎಂದು ಸಚಿನ್ ಪೈಲಟ್ ಜೈಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಭಾರತ-ಚೀನಾ ನಡುವಿನ ಗಡಿ ಉದ್ವಿಗ್ನತೆಯಿಂದ ಜನರ ಗಮನವನ್ನು ಬೇರಡೆ ಸೆಳೆಯಲು ಇತರ ವಿಷಯಗಳ ಬಗ್ಗೆ ಮಾತನಾಡಲಾಗುತ್ತಿದೆ. ಯಾವುದೇ ಕ್ರಮ ಕೈಗೊಂಡರೆ ಇಡೀ ದೇಶ ಸರಕಾರದೊಂದಿಗೆ ಇರುತ್ತದೆ'' ಎಂದು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಹೇಳಿದ್ದಾರೆ.
ಭಾರತ-ಚೀನಾ ಗಡಿಯಲ್ಲಿ ಚೀನಾದ ಆಕ್ರಮಣಶೀಲತೆ, ಉದ್ಯೋಗ ನಷ್ಟ, ನಿರುದ್ಯೋಗ, ಜಿಡಿಪಿ ಬೆಳವಣಿಗೆಯ ದರದಲ್ಲಿ ಕುಸಿತ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳನ್ನು ರಾಹುಲ್ ಗಾಂಧಿ ಸರಣಿ ಟ್ವೀಟ್‌ಗಳಲ್ಲಿ ಎತ್ತಿದ್ದರು.
ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಕೋವಿಡ್ ವಿರುದ್ದ ಮೋದಿ ಸಕಾರದ ಯೋಜಿತ ಹೋರಾಟ ಭಾರತವನ್ನು ಪ್ರಪಾತಕ್ಕೆ ತಳ್ಳಿದೆ ಎಂದು ಹೇಳಿದ್ದಲ್ಲದೆ,ಐತಿಹಾಸಿಕ ಜಿಡಿಪಿ ಕಡಿತ(ಶೇ.24), 2.12 ಕೋಟಿ ಉದ್ಯೋಗ ನಷ್ಟ,15.5 ಲಕ್ಷ ಕೋಟಿ ಹೆಚ್ಚುವರಿ ಒತ್ತಡದ ಸಾಲಗಳು,ಜಾಗತಿಕವಾಗಿ ಅತ್ಯಂತ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳು ಹಾಗೂ ಸಾವುಗಳನ್ನು ಪಟ್ಟಿ ಮಾಡಿದ್ದಾರೆ.