ನ್ಯಾಯಾಂಗ ನಿಂದನೆ ಪ್ರಕರಣ: ತೀರ್ಪು ಪ್ರಶ್ನಿಸುವ ಹಕ್ಕಿಗಾಗಿ ಸುಪ್ರೀಂ ಮೆಟ್ಟಿಲೇರಿದ ಪ್ರಶಾಂತ್ ಭೂಷಣ್

Update: 2020-09-12 17:17 GMT

ಹೊಸದಿಲ್ಲಿ,ಸೆ.12: ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ ಭೂಷಣ್ ಅವರು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನನ್ನು ತಪ್ಪಿತಸ್ಥನೆಂದು ಘೋಷಿಸಿ ಕಳೆದ ತಿಂಗಳು ಹೊರಬಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಹಕ್ಕನ್ನು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.

 ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ನ್ಯಾಯಾಲಯವೇ ವಾದಿಯಾಗಿರುವುದರಿಂದ ನಿರಂಕುಶತೆಯ,ಪ್ರತೀಕಾರದ ಮತ್ತು ದರ್ಪದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಭೂಷಣ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಮೇಲ್ಮನವಿ ಸಲ್ಲಿಸುವ ಹಕ್ಕು ಸಂವಿಧಾನ ಮತ್ತು ಅಂತರರಾಷ್ಟ್ರೀಯ ಕಾನೂನು ಸಹ ಖಾತರಿ ನೀಡಿರುವ ಮೂಲಭೂತ ಹಕ್ಕು ಆಗಿದೆ ಎಂದು ಅರ್ಜಿಯಲ್ಲಿ ವಾದಿಸಿರುವ ಭೂಷಣ್,ತಪ್ಪಾಗಿ ದೋಷನಿರ್ಣಯಗೊಂಡ ಸಂದರ್ಭಗಳಲ್ಲಿ ನ್ಯಾಯವನ್ನು ಪಡೆಯಲು ಇದು ಅವಕಾಶ ನೀಡುತ್ತದೆ ಎಂದಿದ್ದಾರೆ.

ತನ್ನ ಅರ್ಜಿಯ ವಿಚಾರಣೆಯನ್ನು ವಿಸ್ತ್ರತ ಪೀಠ ಮತ್ತು ಭಿನ್ನ ಪೀಠವು ನಡೆಸಬೇಕು ಎಂದೂ ಅವರು ಹೇಳಿದ್ದಾರೆ. ಹಾಲಿ ಪದ್ಧತಿಯಂತೆ ನ್ಯಾಯಾಂಗ ನಿಂದನೆಗಾಗಿ ತಪ್ಪಿತಸ್ಥ ಎಂದು ಘೋಷಿಸಲ್ಪಟ್ಟ ವ್ಯಕ್ತಿಗೆ ಪುನರ್‌ಪರಿಶೀಲನೆ ಅರ್ಜಿಯನ್ನು ಸಲ್ಲಿಸುವ ಹಕ್ಕು ಇದೆ, ಆದರೆ ಈ ಅರ್ಜಿಯನ್ನು ಪೀಠವು ತನ್ನ ಚೇಂಬರ್‌ನಲ್ಲಿಯೇ ಇತ್ಯರ್ಥಗೊಳಿಸುತ್ತದೆ ಮತ್ತು ಸಾಮಾನ್ಯವಾಗಿ ಅರ್ಜಿದಾರನ ಅಹವಾಲನ್ನು ಆಲಿಸುವುದಿಲ್ಲ.

ತನ್ನ ಎರಡು ಟ್ವೀಟ್‌ಗಳಿಗಾಗಿ ನ್ಯಾಯಾಂಗ ನಿಂದನೆ ಆರೋಪವನ್ನು ಹೊತ್ತಿದ್ದ ಭೂಷಣ್‌ರನ್ನು ತಪ್ಪಿತಸ್ಥ ಎಂದು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ಒಂದು ರೂ.ದಂಡವನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News