ಮೊದಲ ಏಕದಿನ: ಆಸ್ಟ್ರೇಲಿಯಕ್ಕೆ ರೋಚಕ ಜಯ

Update: 2020-09-12 17:48 GMT

ಮ್ಯಾಂಚೆಸ್ಟರ್, ಸೆ.12: ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 19 ರನ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿದ್ದು, ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಆತಿಥೇಯ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿತು. ಗೆಲ್ಲಲು 295 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ ಸ್ಯಾಮ್ ಬಿಲ್ಲಿಂಗ್ಸ್(118) ಚೊಚ್ಚಲ ಶತಕ ಹಾಗೂ ಜಾನಿ ಬೈರ್ ಸ್ಟೋವ್(84) ಅರ್ಧಶತಕದ ಕೊಡುಗೆಯ ಹೊರತಾಗಿಯೂ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 275 ರನ್ ಗಳಿಸಿ ಸೋಲೊಪ್ಪಿಕೊಂಡಿತು.

 ರನ್ ಚೇಸಿಂಗ್ ವೇಳೆ ಇಂಗ್ಲೆಂಡ್ ಕಳಪೆ ಆರಂಭ ಪಡೆಯಿತು. 16.1 ಓವರ್‌ಗಳಲ್ಲಿ 57 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಜಾನಿ ಬೈರ್‌ಸ್ಟೋವ್(84) ಹಾಗೂ ಸ್ಯಾಮ್ ಬಿಲ್ಲಿಂಗ್ಸ್(118)ಐದನೇ ವಿಕೆಟ್‌ಗೆ 113 ರನ್ ಜೊತೆಯಾಟ ನಡೆಸಿದರು. ಬಿಲ್ಲಿಂಗ್ಸ್ ಕೊನೆಯ ಓವರ್ ತನಕ ಇಂಗ್ಲೆಂಡ್‌ಗೆ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ ಅವರು ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಗೆಲುವಿಗೆ 19 ರನ್ ಕೊರತೆ ಉಂಟಾಯಿತು.ಇಂಗ್ಲೆಂಡ್ ಸೋಲಿನೊಂದಿಗೆ ಬಿಲ್ಲಿಂಗ್ಸ್ ಚೊಚ್ಚಲ ಶತಕ(118, 110 ಎಸೆತ, 14 ಬೌಂಡರಿ, 2 ಸಿಕ್ಸರ್)ವ್ಯರ್ಥವಾಯಿತು.

ವೇಗದ ಬೌಲರ್ ಜೋಶ್ ಹೇಝಲ್‌ವುಡ್(3-26) ಹಾಗೂ ಸ್ಪಿನ್ನರ್ ಆ್ಯಡಮ್ ಝಾಂಪ(4-55)ಇಂಗ್ಲೆಂಡ್‌ಗೆ ಗೆಲುವನ್ನು ನಿರಾಕರಿಸಿದರು. ಹೇಝಲ್‌ವುಡ್ ‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾದರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ಆಸ್ಟ್ರೇಲಿಯ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್(6) ಹಾಗೂ ಆ್ಯರೊನ್ ಫಿಂಚ್(16) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ 3ನೇ ಕ್ರಮಾಂಕಕ್ಕೆ ಭಡ್ತಿ ಪಡೆದಿದ್ದ ಮಾರ್ಕಸ್ ಸ್ಟೋನಿಸ್ 34 ಎಸೆತಗಳಲ್ಲಿ 43 ರನ್ ಗಳಿಸಿ ವುಡ್‌ಗೆ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯ 123 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಮಿಚೆಲ್ ಮಾರ್ಷ್(73 ರನ್,100 ಎಸೆತ)ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(77 ರನ್, 59 ಎಸೆತ)6ನೇ ವಿಕೆಟ್ ಜೊತೆಯಾಟದಲ್ಲಿ 126 ರನ್ ಸೇರಿಸಿ ತಂಡದ ಚೇತರಿಕೆಗೆ ನೆರವಾದರು.

ಇಂಗ್ಲೆಂಡ್‌ನ ಪರವಾಗಿ ವುಡ್(3-54) ಹಾಗೂ ಆರ್ಚರ್(3-57)ತಲಾ 3 ವಿಕೆಟ್‌ಗಳನ್ನು ಕಬಳಿಸಿದರೆ, ಆದಿಲ್ ರಶೀದ್(2-55)ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News