ನೀಟ್ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 3,706 ವಿದ್ಯಾರ್ಥಿಗಳು ಹಾಜರು

Update: 2020-09-13 14:08 GMT

ಮಂಗಳೂರು, ಸೆ.13: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ 2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ 10 ಕೇಂದ್ರಗಳಲ್ಲಿ ಕೊರೋನ ಮುಂಜಾಗ್ರತೆಯ ನಡುವೆ ನಡೆದಿದ್ದು, 3,706 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ದ.ಕ. ಮಾತ್ರವಲ್ಲದೆ, ಮೈಸೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮೂಲದ ವಿದ್ಯಾರ್ಥಿಗಳು ಕೂಡ ಪರೀಕ್ಷೆಗೆ ಮಂಗಳೂರಿಗೆ ಆಗಮಿಸಿದ್ದರು. ಕೇರಳದ ಕಾಸರಗೋಡಿನ ವಿದ್ಯಾರ್ಥಿಗಳು ಕೂಡ ಆಗಮಿಸಿದ್ದರು. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ ಒಟ್ಟು 5,023 ವಿದ್ಯಾರ್ಥಿಗಳ ಪೈಕಿ 1,317 ಮಂದಿ ಗೈರು ಹಾಜರಾಗಿದ್ದರು.

ಕೊರೋನ ಮುಂಜಾಗ್ರತೆಯಾಗಿ ಸುರಕ್ಷಿತ ಅಂತರ ಕಾಪಾಡುವುದರೊಂದಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಪ್ರತಿ ಕೊಠಡಿಯಲ್ಲಿ 12 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು ಮಾತ್ರವಲ್ಲದೆ, ಪರೀಕ್ಷಾ ಸಿಬ್ಬಂದಿ ಕೂಡ ಥರ್ಮಲ್  ಸ್ಕ್ಯಾನ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಮಾಡಬೇಕಿತ್ತು. ಈ ಬಾರಿ ವಿಶೇಷವಾಗಿ ವಿದ್ಯಾರ್ಥಿಗಳನ್ನು ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿದ ನಂತರ ಅವರು ನೋಂದಣಿ ಸಂಖ್ಯೆಯ ಪರಿಶೀಲನೆ ಬಳಿಕ ಪರೀಕ್ಷಾ ಕೊಠಡಿಗೆ ಸಾಗಬೇಕಿತ್ತು.

ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ ಕಾಲೇಜು, ವಳಚ್ಚಿಲ್ ಶ್ರೀನಿವಾಸ ಇನ್ಸ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಕಾಲೇಜು, ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು, ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಕೆಂಜಾರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು, ಮೂಡುಬಿದಿರೆ ಆಳ್ವಾಸ್ ಕಾಲೇಜು, ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್, ಜೆಪ್ಪಿನಮೊಗರು ದಿ ಯೆನೆಪೊಯ ಸ್ಕೂಲ್, ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯ ಹಾಗೂ ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸ್ಕೂಲ್‌ನಲ್ಲಿ ನೀಟ್ ಪರೀಕ್ಷೆ ನಡೆಯಿತು.

ಸಾಂಕ್ರಾಮಿಕ ರೋಗದಿಂದಾಗಿ ಎರಡು ಬಾರಿ ನೀಟ್ ಪ್ರವೇಶ ಪರೀಕ್ಷೆ ಮುಂದೂಡಲ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News