ಡ್ರಗ್ಸ್ ವಿಚಾರ ಮುನ್ನೆಲೆಗೆ ತಂದು ಭ್ರಷ್ಟಾಚಾರ ಮರೆಮಾಚುವ ಯತ್ನ: ಸಲೀಂ ಅಹ್ಮದ್

Update: 2020-09-13 14:34 GMT

ಉಡುಪಿ, ಸೆ.13: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ವೈಫಲ್ಯಕ್ಕೆ ಡ್ರಗ್ಸ್ ಹಾಗೂ ಡಿ.ಜೆ.ಹಳ್ಳಿ ಪ್ರಕರಣಗಳೇ ಸಾಕ್ಷಿ. ಸರಕಾರ ಡ್ರಗ್ಸ್ ವಿಚಾರ ಮುನ್ನೆಲೆಗೆ ತಂದು ಕೊರೋನ ಸೇರಿದಂತೆ ಇತರ ವೈಫಲ್ಯಗಳನ್ನು ಮರೆಮಾಚುತ್ತಿದೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾದ ಬಗ್ಗೆ ಲೆಕ್ಕಕೊಡಿ ಉತ್ತರ ಕೊಡಿ ಎಂದು ಕೇಳಿದರೆ, ರಾಜ್ಯ ಸಚಿವರು ಅದನ್ನು ಬಿಟ್ಟು ಡ್ರಗ್ಸ್ ಬಗ್ಗೆ ಮಾತನಾಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕೇವಲ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.

ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೂ ರಕ್ಷಣೆ ಕೊಡುವುದಿಲ್ಲ. ಎಲ್ಲ ರೀತಿಯ ತನಿಖೆಗೆ ಕಾಂಗ್ರೆಸ್ ಸಹಕಾರ ನೀಡುತ್ತದೆ. ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಬೇಕು. ಬಂಧಿತ ರಾಗಿಣಿ ಬಿಜೆಪಿ ಪಕ್ಷದ ಕಾರ್ಯಕರ್ತೆಯಾಗಿದ್ದಾರೆ. ಡ್ರಗ್ಸ್ ನಿರ್ಮೂಲನೆ ರಾಜಕೀಯ ಇಚ್ಛಾಶಕ್ತಿ ಮುಖ್ಯ. ಅದನ್ನು ಪ್ರದರ್ಶಿಸುವ ಕೆಲಸವನ್ನು ಸರಕಾರ ಮಾಡಬೇಕೆಂದು ಅವರು ಒತ್ತಾಯಿಸಿದರು.

ಕಳೆದ ವರ್ಷದ ಪ್ರವಾಹದ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಬಾರಿ ಕೂಡ 10 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ ಕೇಂದ್ರ ಸರಕಾರ ಕೇವಲ 600ಕೋಟಿ ರೂ. ಮಾತ್ರ ನೀಡಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ. ಇಲ್ಲಿ ಹುಲಿಯಾಗಿರುವ ಇವರು, ದೆಹಲಿಯಲ್ಲಿ ಬೆಕ್ಕಿನಂತೆ ವರ್ತಿಸುತ್ತಿದ್ದಾರೆ. ಪ್ರಧಾನಿ ಮುಂದೆ ನಿಂತು ಮಾತಾಡುವ ಧೈರ್ಯ ಇವರಿಗೆ ಇಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.

ಮುಂದಿನ ಅಧಿವೇಶನದಲ್ಲಿ ಪ್ರವಾಹ ವಿಚಾರ ಖರ್ಚುವೆಚ್ಚಗಳ ಬಗ್ಗೆ ಅಧಿವೇಶನದಲ್ಲಿ ಶ್ವೇತಪತ್ರ ಕೇಳಲಾಗುವುದು. ಭ್ರಷ್ಟಾಚಾರ, ಡ್ರಗ್ಸ್, ಡಿ.ಜೆ.ಹಳ್ಳಿ ಪ್ರಕರಣಗಳು ಹಾಗೂ ವಿವಿಧ ಜನವಿರೋಧಿ ಮಸೂದೆಗಳ ವಿರುದ್ಧ ಅಧಿ ವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡ ಎಂ.ಎ.ಗಫೂರ್, ಕಳ್ಳಿಗೆ ತಾರನಾಥ್ ಶೆಟ್ಟಿ, ಮಂಜುನಾಥ್ ಭಂಡಾರಿ, ಭಾಸ್ಕರ್ ರಾವ್ ಕಿದಿಯೂರು, ವರೋನಿಕಾ ಕರ್ನೆಲಿಯೋ, ಶಾಹಿದ್ ಅಲಿಮೊದಲಾದವರು ಉಪಸ್ಥಿತರಿದ್ದರು.

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್‌ರನ್ನು ಎಳೆದು ತರುವ ಬಗ್ಗೆ ವಿಚಾರಣೆ ಆಗಬೇಕು. ಈ ಪ್ರಕರಣದಲ್ಲಿ ಯಾರೂ ತಪ್ಪು ಮಾಡಿದರೂ ಪಕ್ಷ ಸಹಕಾರ ಕೊಡುವುದಿಲ್ಲ. ಮೊದಲು ತನಿಖೆ ನಡೆಯಬೇಕು. ಅದರ ಮಧ್ಯೆ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಲೀಂ ಅಹ್ಮದ್ ತಿಳಿಸಿದರು.

ಝಮೀರ್ ಬಗ್ಗೆ ಸರಕಾರ, ಮಂತ್ರಿಗಳು ಈಗ ಹೇಳಿಕೆ ಕೊಡುವುದು ಸರಿಯಲ್ಲ. ಬಿಜೆಪಿ ನಾಯಕರು ತನಿಖಾಧಿಕಾರಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮೂರು ದಿನಗಳಲ್ಲಿ ಝಮೀರ್ ಬಂಧನ ಎಂದಿದ್ದರು. ಈ ಹೇಳಿಕೆ ಕೊಡುವ ಅಧಿಕಾರ ರವಿಕುಮಾರ್ ಗೆ ಯಾರು ಕೊಟ್ಟರು. ರವಿಕುಮಾರ್ ತನಿಖಾಧಿಕಾರಿಯೇ? ಗೃಹಸಚಿವರೇ? ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News