ಬಿಜೆಪಿ ಕಂಗನಾರನ್ನು ಬೆಂಬಲಿಸುತ್ತಿರುವುದು ದುರದೃಷ್ಟಕರ: ಸಂಜಯ್ ರಾವತ್

Update: 2020-09-13 14:44 GMT

ಹೊಸದಿಲ್ಲಿ, ಸೆ. 13: ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಹೊರತಾಗಿಯೂ ಕಂಗನಾ ರಾಣವತ್ ಅವರನ್ನು ಬಿಜೆಪಿ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ರವಿವಾರ ಹೇಳಿದ್ದಾರೆ.

ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ವಾರದ ಕಾಲಂ ರೋಕ್‌ಟಾಕ್‌ನಲ್ಲಿ ಸಂಜಯ್ ರಾವತ್, ಇದು ಮುಂಬೈಯ ಪ್ರಾಮುಖ್ಯತೆಯನ್ನು ವ್ಯವಸ್ಥಿತವಾಗಿ ಕಡಿಮೆ ಮಾಡುವ ಪ್ರಯತ್ನ ಹಾಗೂ ಮುಂಬೈ ನಗರದ ವರ್ಚಸ್ಸಿಗೆ ನಿರಂತರ ಧಕ್ಕೆ ಉಂಟು ಮಾಡುವ ಸಂಚಿನ ಒಂದು ಭಾಗ ಎಂದಿದ್ದಾರೆ.

ಇದು ಸಂದಿಗ್ದದ ಕಾಲ. ಆದುದರಿಂದ ಮಹಾರಾಷ್ಟ್ರದ ಎಲ್ಲ ಮರಾಠಿ ಜನರು ಸಂಘಟಿತರಾಗಬೇಕು ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತನ್ನ ನಿಲುವಿನ ಮೂಲಕ ಹಾಗೂ ಕಂಗನಾ ರಾಣವತ್‌ಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಬಿಜೆಪಿ ಬಿಹಾರದಲ್ಲಿ ಮೇಲ್ಜಾತಿ ರಜಪೂತರು ಹಾಗೂ ಕ್ಷತ್ರಿಯರ ಮತಗಳ ಮೂಲಕ ಚುನಾವಣೆಯಲ್ಲಿ ಜಯ ಗೆಲ್ಲಲು ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.

‘ಒಬ್ಬ ನಟಿ ಮುಖ್ಯಮಂತ್ರಿಯನ್ನು ಅವಮಾನಿಸುತ್ತಾರೆ. ಆದರೆ, ರಾಜ್ಯದ ಜನತೆ ಪ್ರತಿಕ್ರಿಯಿಸಬಾರದು. ಈ ಪಕ್ಷಪಾತದ ಸ್ವಾತಂತ್ರ್ಯ ಯಾವ ರೀತಿಯದ್ದು?’ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಎಂದು ಕರೆಯುವ ನಗರದಲ್ಲಿ ಅವರ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಿದಾಗ, ನೆಲಸಮಗೊಂಡ ಕಟ್ಟಡವನ್ನು ರಾಮ ಮಂದಿರ ಎಂದು ಕರೆಯುತ್ತಾರೆ. ಅಕ್ರಮ ಕಟ್ಟಡದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ನೀವು ಅಳುತ್ತೀರಿ. ಇದು ಯಾವ ರೀತಿಯ ಆಟ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News