30 ವರ್ಷ ಏಕಾಂಗಿಯಾಗಿ ನೀರಿಗಾಗಿ 3 ಕಿ.ಮೀ. ಸುರಂಗ ಕೊರೆದ ವ್ಯಕ್ತಿ !

Update: 2020-09-13 14:51 GMT

ಗಯಾ (ಬಿಹಾರ್), ಸೆ. 13: ಬಿಹಾರ ಗಯಾದ ಲಥುವಾ ಪ್ರದೇಶದಲ್ಲಿರುವ ಕೋಟಿಲವಾ ಗ್ರಾಮದಲ್ಲಿರುವ ತನ್ನ ಹೊಲಕ್ಕೆ ಸಮೀಪದ ಬೆಟ್ಟದ ಮಳೆ ನೀರನ್ನು ತರಲು ಇಲ್ಲಿನ ವ್ಯಕ್ತಿಯೋರ್ವರು 3 ಕಿ.ಮೀ. ಉದ್ದದ ಸುರಂಗ ಕೊರೆದು ಅಚ್ಚರಿ ಮೂಡಿಸಿದ್ದಾರೆ.

 ಗ್ರಾಮದಲ್ಲಿರುವ ಕೊಳಕ್ಕೆ ನೀರು ಹರಿಸುವ ಸುರಂಗ ಕೊರೆಯಲು ತನಗೆ 30 ವರ್ಷ ಕಾಲ ಹಿಡಿಯಿತು ಎಂದು ಗಯಾದಲ್ಲಿ ಏಕಾಂಗಿಯಾಗಿ ಸುರಂಗ ಕೊರೆದಿರುವ 70 ವರ್ಷದ ಲೋಂಗಿ ಭುಇಯಾ ತಿಳಿಸಿದ್ದಾರೆ.

“ಕಳೆದ 30 ವರ್ಷಗಳಿಂದ ನಾನು ನನ್ನ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಕರೆದೊಯ್ಯುತ್ತಿದ್ದೆ. ಆಗ ಸುರಂಗ ಕೊರೆಯುತ್ತಿದ್ದೆ. ಈ ಸಾಹಸದಲ್ಲಿ ಯಾರೊಬ್ಬರೂ ಕೈಜೋಡಿಸಿಲ್ಲ. ಗ್ರಾಮ ನಿವಾಸಿಗಳು ತಮ್ಮ ಜೀವನೋಪಾಯಕ್ಕಾಗಿ ನಗರಕ್ಕೆ ತೆರಳುತ್ತಿದ್ದಾರೆ. ಆದರೆ, ನಾನು ಇಲ್ಲೇ ಉಳಿದುಕೊಂಡೆ” ಎಂದು ಅವರು ಹೇಳಿದ್ದಾರೆ.

ಗಯಾ ಜಿಲ್ಲಾ ಕೇಂದ್ರದಿಂದ 80 ಕಿ.ಮೀ. ದೂರದಲ್ಲಿರುವ ಕೋಟಿಲವಾ ಗ್ರಾಮ ದಟ್ಟ ಅರಣ್ಯ ಹಾಗೂ ಬೆಟ್ಟಗಳಿಂದ ಆವರಿಸಿದೆ. ಇದು ಮಾವೋವಾದಿಗಳಿಗೆ ಆಶ್ರಯ ತಾಣ ಎಂದು ಗುರುತಿಸಲ್ಪಟ್ಟಿದೆ.

ಗಯಾದ ಜನರ ಮುಖ್ಯ ಜೀವನೋಪಾಯ ಕೃಷಿ ಹಾಗೂ ಜಾನುವಾರು ಸಾಕಣೆ. ಮಳೆಗಾಲದಲ್ಲಿ ಬೆಟ್ಟಗಳಿಂದ ಕೆಳಗೆ ಹರಿಯುವ ಮಳೆ ನೀರು ನದಿ ಸೇರುತ್ತದೆ. ಈ ನೀರನ್ನು ತನ್ನ ಹೊಲಕ್ಕೆ ಹರಿಸಲು ಸುರಂಗ ಕೊರೆಯಲು ಲೋಂಗಿ ಭುಇಯಾ ನಿರ್ಧರಿಸಿದ್ದರು.

 ಅವರು ಕಳೆದ 30 ವರ್ಷಗಳಿಂದ ಏಕಾಂಗಿಯಾಗಿ ಸುರಂಗ ಕೊರೆಯುತ್ತಿದ್ದರು. ಇದು ದೊಡ್ಡ ಸಂಖ್ಯೆಯ ಜಾನುವಾರುಗಳಿಗೆ ನೆರವಾಗಿದೆ. ಅಲ್ಲದೆ, ಹೊಲಗಳಿಗೆ ನೀರುಣಿಸಲು ಸಾಧ್ಯವಾಗಿದೆ. ಅವರು ತಮ್ಮ ಲಾಭಕ್ಕಾಗಿ ಮಾತ್ರ ಈ ಸುರಂಗ ತೋಡಿಲ್ಲ. ಬದಲಾಗಿ ಇಡೀ ಪ್ರದೇಶದ ಜನರಿಗಾಗಿ ಸುರಂಗ ತೋಡಿದರು ಎಂದು ಸ್ಥಳೀಯ ನಿವಾಸಿ ಪಟ್ಟಿ ಮಂಝಿ ತಿಳಿಸಿದ್ದಾರೆ.

ಈ ಸುರಂಗ ಇಲ್ಲಿನ ಅಸಂಖ್ಯಾತ ಜನರಿಗೆ ನೆರವಾಗಿದೆ. ಈ ಸಾಧನೆಯ ಕಾರಣಕ್ಕೆ ಇಲ್ಲಿನ ಜನರು ಲೋಂಗಿ ಭುಇಯಾ ಅವರನ್ನು ಗುರುತಿಸುತ್ತಿದ್ದಾರೆ ಎಂದು ಗಯಾದ ಅದ್ಯಾಪಕ ರಾಮ್ ವಿಲಾಸ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News