ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಸಂಸತ್ ನ ಮುಂಗಾರು ಅಧಿವೇಶನ

Update: 2020-09-13 17:45 GMT

ಹೊಸದಿಲ್ಲಿ, ಸೆ.13: ಕೊರೋನಾ ಆತಂಕದ ನಡುವೆ 18 ದಿನಗಳ ಕಾಲ ನಡೆಯಲಿರುವ ಸಂಸತ್‌ನ ಮುಂಗಾರು ಅಧಿವೇಶನವು ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.

ಇದೇ ಮೊದಲ ಸಲ ಲೋಕಸಭೆ ಹಾಗೂ ರಾಜ್ಯಸಭೆ ಅಧಿವೇಶನವಿಡೀ ಯಾವುದೇ ಬಿಡುವಿಲ್ಲದೆ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ. ಕೋವಿಡ್-19 ನೆಗೆಟಿವ್ ಪರೀಕ್ಷಾ ವರದಿಯಿರುವ ಸಂಸದರಿಗೆ ಹಾಗೂ ಸಿಬ್ಬಂದಿಗೆ ಮಾತ್ರವೇ ಸಂಸತ್ ಭವನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಹಾಗೂ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ.

► ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಉಭಯ ಸದನಗಳಲ್ಲಿಯೂ ಸಂಸದರ ಆಸನ ವ್ಯವಸ್ಥೆಯಲ್ಲಿ ವಿಶೇಷ ಮಾರ್ಪಾಡುಗಳನ್ನು ಮಾಡಲಾಗಿದೆ.

► ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ಪ್ರಶ್ನೋತ್ತರ ಕಲಾಪವನ್ನು ರದ್ದುಪಡಿಸಲಾಗಿದೆ.

► ಕೋವಿಡ್-19 ಹಿನ್ನೆಲೆಯಲ್ಲಿ ಸಂಸತ್‌ನ ಮುಂಗಾರು ಅಧಿವೇಶನಕ್ಕೆ ಮುನ್ನ ಸರ್ವಪಕ್ಷ ಸಭೆಯನ್ನು ಈ ಬಾರಿ ನಡೆಸಲಾಗಿಲ್ಲ.

ನಾಲ್ಕು ಮಸೂದೆಗಳಿಗೆ ಪ್ರತಿಪಕ್ಷಗಳ ವಿರೋಧ

ಮೋದಿ ಸರಕಾರವು ಈ ಸಲದ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಹೊರಟಿರುವ 11 ಮಸೂದೆಗಳ ಪೈಕಿ ನಾಲ್ಕನ್ನು ಬಲವಾಗಿ ವಿರೋಧಿಸಲು ನಿರ್ಧರಿಸವೆ.

ಕೃಷಿಗೆ ಸಂಬಂಧಿಸಿದ ಅವಶ್ಯಕ ಸಾಮಗ್ರಿಗಳ ತಿದ್ದುಪಡಿ ಕಾಯ್ದೆ, ರೈತರ (ಸಶಕ್ತೀಕರಣ ಹಾಗೂ ರಕ್ಷಣೆ) ಉತ್ಪನ್ನಗಳ ಬೆಲೆ ಖಾತರಿ ಒಪ್ಪಂದ ಹಾಗೂ ಕೃಷಿಸೇವೆಗಳ ಅಧ್ಯಾದೇಶವನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಲಿದೆ. ಈ ಬಗ್ಗೆ ಪಕ್ಷವು ಇತರ ಪ್ರತಿಪಕ್ಷಗಳ ಜೊತೆ ಸಂಪರ್ಕದಲ್ಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದರು. ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣಗೊಳಿಸುವ ಹುನ್ನಾರದಿಂದ ಈ ಅದ್ಯಾದೇಶಗಳನ್ನು ಜಾರಿಗೆ ತರಲು ಯತ್ನಿಸಲಾಗುತ್ತಿದೆಯೆಂದು ಪ್ರತಿಪಕ್ಷಗಳು ಆರೋಪಿಸಿವೆ.

 ಬ್ಯಾಂಕ್‌ಗಳ ಮೇಲೆ ರಾಜ್ಯಗಳ ನಿಯಂತ್ರಣವನ್ನು ಕಸಿದುಕೊಳ್ಳುವ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆಯನ್ನೂ ಕೂಡಾ ಸಂಸತ್‌ನಲ್ಲಿ ವಿರೋಧಿಸಲಾಗುವುದೆಂದು ಅವರು ಹೇಳಿದ್ದಾರೆ.

ಸೋನಿಯಾ, ರಾಹುಲ್ ಗೈರು

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್‌ ಗಾಂಧಿ ಸೇರಿದಂತೆ ಈ ಹಲವಾರು ಸಂಸದರು ಮುಂಗಾರು ಅಧಿವೇಶನಕ್ಕೆ ಗೈರು ಹಾಜರಾಗಲಿದ್ದಾರೆ.

 ವಾರ್ಷಿಕ ವೈದ್ಯಕೀಯ ತಪಾಸಣೆಗಾಗಿ ಸೋನಿಯಾ ಅವರು ಕನಿಷ್ಠ ಎರಡು ವಾರಗಳ ಕಾಲ ವಿದೇಶಕ್ಕೆ ತೆರಳಲಿದ್ದು, ಅವರೊಂದಿಗೆ ಪುತ್ರ ರಾಹುಲ್ ಗಾಂಧಿ ಕೂಡಾ ಪ್ರಯಾಣಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News