ವಿಮಾನಗಳಲ್ಲಿ ಛಾಯಾಚಿತ್ರ ತೆಗೆಯಲು ನಿಷೇಧ ಇಲ್ಲ: ಡಿಜಿಸಿಎ ಸ್ಪಷ್ಟನೆ

Update: 2020-09-13 18:03 GMT

ಹೊಸದಿಲ್ಲಿ, ಸೆ. 13: ವಿಮಾನದ ಒಳಗೆ ಪ್ರಯಾಣಿಕರು ಛಾಯಾಚಿತ್ರಗಳನ್ನು ತೆಗೆಯಬಹುದು. ಆದರೆ, ವಾಯುಪಡೆಯ ರಕ್ಷಣಾ ವಿಮಾನಗಳು ನಿಂತಿದ್ದಾಗ, ಹಾರಾಟ ಆರಂಭಿಸಿದಾಗ, ಇಳಿಯುತ್ತಿರುವಾಗ ಛಾಯಾಚಿತ್ರಗಳನ್ನು ತೆಗೆಯುವುದಕ್ಕೆ ನಿಷೇಧ ಮುಂದುವರಿಯಲಿದೆ.

ವಿಮಾನಗಳಲ್ಲಿ ಛಾಯಾಚಿತ್ರ ತೆಗೆಯುವ ಕುರಿತ ತನ್ನ ಒಂದು ದಿನದ ಹಿಂದಿನ ಆದೇಶಕ್ಕೆ ಸಂಬಂಧಿಸಿ ನಾಗರಿಕ ವಾಯುಯಾನದ ಮಹಾ ನಿರ್ದೇಶಕ (ಡಿಜಿಸಿಎ) ರವಿವಾರ ಈ ಸ್ಪಷ್ಟನೆ ನೀಡಿದ್ದಾರೆ.

ಆದರೆ, ವಿಮಾನ ಸುರಕ್ಷೆಯೊಂದಿಗೆ ರಾಜಿ ಮಾಡಿಕೊಳ್ಳುವ ಯಾವುದೇ ರೆಕಾರ್ಡಿಂಗ್ ಉಪಕರಣಗಳ ಬಳಕೆ, ಪ್ರಸಕ್ತ ನಿಯಮಗಳ ಉಲ್ಲಂಘನೆ, ವಿಮಾನ ಸಂಚರಿಸುತ್ತಿರುವಾಗ ಆತಂಕ ಅಥವಾ ಅಡ್ಡಿ ಉಂಟು ಮಾಡುವುದು ಈ ಅನುಮತಿಯಲ್ಲಿ ಸೇರಿಲ್ಲ. ಈ ಮೇಲಿನ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಾಯು ಯಾನದ ಮಹಾ ನಿರ್ದೇಶಕರ ಸ್ಪಷ್ಟನೆ ತಿಳಿಸಿದೆ.

ವಿಮಾನ ನಿಲ್ದಾಣ ಹಾಗೂ ವಿಮಾನದ ಒಳಗೆ ಪ್ರಯಾಣಿಕರು ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸುವ ಉದ್ದೇಶವನ್ನು ಶನಿವಾರದ ಆದೇಶ ಹೊಂದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಬಾಲಿವುಡ್ ನಟಿ ಕಂಗನಾ ರಾಣಾವತ್ ಬುಧವಾರ ಚಂಡಿಗಢದಿಂದ ಮುಂಬೈಗೆ ಸಂಚರಿಸಿದ್ದ ವಿಮಾನದಲ್ಲಿ ಆಸೀನರಾಗಿದ್ದರು. ಈ ಸಂದರ್ಭ ಅವರ ಪ್ರತಿಕ್ರಿಯೆ ಪಡೆಯಲು ವರದಿಗಾರರು ಹಾಗೂ ಫೋಟೊ ತೆಗೆಯಲು ಛಾಯಾಗ್ರಾಹಕರು ಮುಗಿಬಿದಿದ್ದರು.

ವಾಯು ಯಾನದ ಮಹಾ ನಿರ್ದೇಶಕರು 2004 ನವೆಂಬರ್‌ನ ನೀಡಿದ ಆದೇಶದಲ್ಲಿ ವಿಮಾನದ ಒಳಗೆ ಛಾಯಾಚಿತ್ರ ತೆಗೆಯಲು ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News