ಡಾ.ಎಮ್.ವಿ.ಶೆಟ್ಟಿ ಟ್ರಸ್ಟ್ ಕಾಲೇಜುಗಳ ಸ್ಥಾಪಕ ಕಾರ್ಯದರ್ಶಿ ಡಾ.ಎಮ್.ಆರ್.ಶೆಟ್ಟಿ ನಿಧನ

Update: 2020-09-14 04:21 GMT

ಮಂಗಳೂರು, ಸೆ.14: ಡಾ.ಎಮ್.ವಿ.ಶೆಟ್ಟಿ ಟ್ರಸ್ಟ್ ಕಾಲೇಜುಗಳ ಸ್ಥಾಪಕ ಕಾರ್ಯದರ್ಶಿ ಡಾ.ಎಮ್.ಆರ್.ಶೆಟ್ಟಿ ಇಂದು ನಿಧರಾಗಿದ್ದಾರೆ.

ದಿವಂಗತ ಡಾ. ಎಮ್.ವಿ.ಶೆಟ್ಟಿಯವರ ಪುತ್ರರಾಗಿರುವ ಡಾ. ಎಮ್.ರಾಮಗೋಪಾಲ ಶೆಟ್ಟಿ ಅವರು ಪತ್ನಿ ಪ್ರೊ.ಹಿಮಾ ಊರ್ಮಿಳಾ ಶೆಟ್ಟಿ, ಮಕ್ಕಳಾದ ಡಾ. ದಿವ್ಯಾಂಜಲಿ ಶೆಟ್ಟಿ, ಡಾ. ರೋಹಿಲಾ ಶೆಟ್ಟಿ ಅವರನ್ನು ಅಗಲಿದ್ದಾರೆ.

ಡಾ.ಎಮ್.ವಿ. ಶೆಟ್ಟಿ ಟ್ರಸ್ಟ್ ಮೂಲಕ ರಾಮಗೋಪಾಲ ಶೆಟ್ಟಿಯವರು ಮಂಗಳೂರು ಯುನಿವರ್ಸಿಟಿ ಅಡಿಯಲ್ಲಿ ನರ್ಸಿಂಗ್, ಫಿಸಿಯೋಥೆರಪಿ, ವಾಕ್ ಹಾಗೂ ಶ್ರವಣ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ಹಾಗೂ ಸಾಮಾಜಿಕ ಕಾರ್ಯ ಹಾಗೂ ಶಿಕ್ಷಣ ದಂತಹ ಹಲವು ವೃತ್ತಿಪರ ಕೋರ್ಸ್ ‌ಗಳನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇವರ ಮಾರ್ಗದರ್ಶನ ಹಾಗೂ ಆಡಳಿತದ ಅಡಿಯಲ್ಲಿ ಟ್ರಸ್ಟ್ ಬೆಂಗಳೂರಿನ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್, ಮಂಗಳೂರು ಯುನಿವರ್ಸಿಟಿಯ ಸಂಯೋಜಿತ 15 ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳನ್ನು 8 ವಿಭಿನ್ನ ವಿಭಾಗಗಳಲ್ಲಿ ಆರಂಭಿಸಿತ್ತು.

ಡಾ.ಶೆಟ್ಟಿಯವರು ಮಂಗಳೂರಿನ ಸೈಂಟ್ ಅಲೋಶಿಯಸ್ ಹೈಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದು, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ತನ್ನ ಪದವಿ ಹಾಗೂ ಸ್ನಾತಕೋತ್ತರ ವೃತ್ತಿಪರ ಶಿಕ್ಷಣವನ್ನು ಪೂರೈಸಿದ್ದರು. ಬಳಿಕ ಅವರು ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡ್‌ಗೆ ತೆರಳಿದರು. ಇಂಗ್ಲೆಂಡ್‌ನಿಂದ ವಾಪಾಸಾದ ಬಳಿಕ ಕೆ.ಎಂ.ಸಿ.ಯಲ್ಲಿ ಸರ್ಜರಿಯ ಸಹಾಯಕ ಪ್ರೊಫೆಸರ್ ಆದರು. 1989ರ ತನಕ ಇಲ್ಲಿಯೇ ಸೇವೆ ಸಲ್ಲಿಸಿದ್ದರು.

ಭಾರತೀಯ ಪುನರ್ವಸತಿ ಮಂಡಳಿಯ ಕಾರ್ಯಕಾರಿ ಸದಸ್ಯರಾಗಿಯೂ, ಮಂಗಳೂರು ಯುನಿವರ್ಸಿಟಿ ಹಾಗೂ ಬೆಂಗಳೂರಿನ ಆರ್‌ಜಿಯುಜಿಎಚ್‌ಎಸ್‌ನಲ್ಲಿ ಮೂರು ವರ್ಷಗಳ ಕಾಲ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಇಂದು ಬೆಳಿಗ್ಗೆ 11ರಿಂದ 1ಗಂಟೆಯ ನಡುವೆ ಅವರ ಸ್ವಗೃಹ ಸ್ವಾಗತ್‌ನಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳೊಂದಿಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News