ಉಪ್ಪಿನಂಗಡಿ: ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಲು ಮನವಿ

Update: 2020-09-14 07:32 GMT

ಉಪ್ಪಿನಂಗಡಿ: ಬೀದಿ ಬದಿ ವ್ಯಾಪಾರ ನಡೆಸಲು ಉಪ್ಪಿನಂಗಡಿಯಲ್ಲಿ ಅವಕಾಶ ನೀಡಬೇಕೆಂದು ಆಗ್ರಹಿಸಿ ಉಪ್ಪಿನಂಗಡಿ ವಲಯ ಬೀದಿ ಬದಿ ವ್ಯಾಪಾರಿಗಳ ಸಂಘ ಪುತ್ತೂರು ಸಹಾಯಕ ಆಯುಕ್ತರು ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.

ಹಲವಾರು ವರ್ಷಗಳಿಂದ ನಾವು ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದೆವು. ಆದರೆ ಕೆಲವು ತಿಂಗಳುಗಳ ಹಿಂದೆ ಉಪ್ಪಿನಂಗಡಿ ಗ್ರಾ.ಪಂ. ನಮಗ್ಯಾವ ಸಮಯಾವಕಾಶವನ್ನು ಕೊಡದೇ ನಿರ್ದಾಕ್ಷಿಣ್ಯವಾಗಿ ನಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಇದರಿಂದ ನಮ್ಮ ಕುಟುಂಬ ಬೀದಿಗೆ ಬೀಳುವಂತಾಗಿದೆ. ನಾವೆಲ್ಲಾ ಬಡವರಾಗಿದ್ದು, ದೊಡ್ಡ ಮಟ್ಟದ ಡೆಪೋಸಿಟ್ ಕಟ್ಟಿ ಅಂಗಡಿ ಕೋಣೆಗಳನ್ನು ಬಾಡಿಗೆಗೆ ಪಡೆಯಲು ನಮ್ಮಿಂದ ಸಾಧ್ಯವಿಲ್ಲ. ನಮ್ಮಲ್ಲಿ ಪಾನಿಪೂರಿ, ಆಮ್ಲೆಟ್ ಗಾಡಿ, ಸಣ್ಣ ಕ್ಯಾಂಟೀನ್ ಸೇರಿದಂತೆ ಹಲವು ವ್ಯಾಪಾರ ಚಟುವಟಿಕೆಗಳನ್ನು ಮಾಡಿಕೊಂಡಿದ್ದವರು ಇದ್ದೇವೆ. ನಮಗೆ ಈ ಕಸುಬಲ್ಲದೆ ಬೇರೆ ಗೊತ್ತಿಲ್ಲ. ಎಲ್ಲಾ ನಗರಗಳಲ್ಲಿ, ಪಟ್ಟಣಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿರುವಾಗ ಉಪ್ಪಿನಂಗಡಿಯಲ್ಲಿ ಮಾತ್ರ ನಮ್ಮನ್ನು ತೆರವುಗೊಳಿಸಿದ್ದು ಯಾಕೆ. ಇದರಿಂದ ನಾವು ಹಾಗೂ ನಮ್ಮನ್ನು ನಂಬಿರುವ ಕುಟುಂಬಗಳು ಬದುಕು ಕಳೆದುಕೊಳ್ಳುವಂತಾಗಿದೆ.

ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಂದ ಸಾಲಕ್ಕಾಗಿ ಅರ್ಜಿ ಪಡೆದುಕೊಳ್ಳಲು ಮೊಬೈಲ್ ಆ್ಯಪ್‍ವೊಂದನ್ನು ಪ್ರಧಾನ ಮಂತ್ರಿಯವರು ಬಿಡುಗಡೆಗೊಳಿಸಿದ್ದಾರೆ. ಅಲ್ಲದೇ, ಕರ್ನಾಟಕ ಸರಕಾರ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಸಾಲವನ್ನು ನೀಡುವ ಯೋಜನೆ ತಂದಿದೆ. ಈ ಮೂಲಕ ಬೀದಿ ಬದಿ ವ್ಯಾಪಾರ ನಡೆಸುವುದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಮಾನ್ಯ ಮಾಡಿವೆ. ಆದರೆ ಉಪ್ಪಿನಂಗಡಿ ಗ್ರಾ.ಪಂ. ಮಾತ್ರ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಮೂಲಕ ನಮ್ಮನ್ನು ಧಮನಿಸುವ ನಡೆ ಅನುಸರಿಸುತ್ತಿದೆ. ಕೋವಿಡ್ -19ನ ಈ ಸಮಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಉಪ್ಪಿನಂಗಡಿ ಗ್ರಾ.ಪಂ. ಮಾತ್ರ ನಮ್ಮಿಂದ ದುಡಿದು ತಿನ್ನುವ ಅವಕಾಶವನ್ನೂ ಕಿತ್ತುಕೊಂಡಿದೆ. ಆದ್ದರಿಂದ ನಮಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡುವ ಮೂಲಕ ನ್ಯಾಯ ಒದಗಿಸಿಕೊಡಬೇಕು ಹಾಗೂ ನಮಗೆ ಬದುಕು ಕಟ್ಟಿಕೊಳ್ಳಲು ನೆರವಾಗಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಸಂಘದ ಅಧ್ಯಕ್ಷ ಸತೀಶ್ ಗೌಡ, ಕಾರ್ಯದರ್ಶಿ ಸಂಶುದ್ದೀನ್, ಉಪಾಧ್ಯಕ್ಷ ಸುಲೈಮಾನ್, ಸದಸ್ಯರಾದ ಗಂಗಾಧರ ಹರಿನಗರ, ಸರಸ್ವತಿ, ಪ್ರಸಾದ್, ಉಬೈದ್ ಆದರ್ಶನಗರ, ಅಸ್ಗರ್ ಅಲಿ, ರಝಾಕ್, ಹನೀಫ್ ಮಾಣಿಮಾರ್, ಮುಸ್ತಾಫ, ಅದ್ದು, ಸಂಘದ ಸಲಹೆಗಾರ ಕಲಂದರ್ ಶಾಫಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News