ಸಂವಿಧಾನ ವಿರೋಧಿ ಕಾರ್ಯವನ್ನು ಬಿಜೆಪಿ ಯಾವತ್ತಿಗೂ ಮಾಡದು: ಛಲವಾದಿ ನಾರಾಯಣಸ್ವಾಮಿ

Update: 2020-09-14 09:15 GMT

ಮಂಗಳೂರು, ಸೆ.14: ದಲಿತರಿಗೆ ವಿರೋಧವಾಗುವ ಅಥವಾ ಸಂವಿಧಾನಕ್ಕೆ ವಿರೋಧ ಮಾಡುವ ಯಾವುದೇ ಕಾರ್ಯವನ್ನು ಬಿಜೆಪಿ ಯಾವತ್ತಿಗೂ ಮಾಡುವುದಿಲ್ಲ ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬಿಜೆಪಿ ದ.ಕ. ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ದ.ಕ. ಬಿಜೆಪಿ ಜಿಲ್ಲಾ ಎಸ್.ಸಿ ಮೋರ್ಚಾದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ದೇಶದ್ರೋಹದ ಕೆಲಸ ಮಾಡುವವರ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ಮಾಡುತ್ತದೆ. ಆದರೆ ಬಿಜೆಪಿಯ ವಿರುದ್ಧ ನಿರಂತರವಾಗಿ ಎತ್ತಿಕಟ್ಟುವ ಮೂಲಕ ಬಿಜೆಪಿಯಿಂದ ದೂರ ಇರಿಸುವ ಕುತಂತ್ರವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ. ಇದರ ವಿರುದ್ಧ ಸಮಾಜ ಪ್ರಸ್ತುತ ಜಾಗೃತವಾಗಿದೆ ಎಂದು ಅವರು ಹೇಳಿದರು.

ಅಂಬೇಡ್ಕರ್ ಅವರನ್ನು ಪೂಜ್ಯತಾ ಭಾವದಿಂದ ನಾವು ಗೌರವಿಸಿದ್ದೇವೆ. ಆರ್ಟಿಕಲ್ 370ಕ್ಕೆ ಅಂದು ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಆದರೆ ಅದನ್ನು ತೆಗೆದುಹಾಕಲು ಕಾಂಗ್ರೆಸ್ ಬಳಿಕ ಮನಸ್ಸು ಮಾಡಿಲ್ಲ. ಬದಲಾಗಿ, ಬಿಜೆಪಿಯು ಅಂಬೇಡ್ಕರ್ ಅವರ ಆಶಯದಂತೆ 370 ರದ್ದುಪಡಿಸುವ ಮೂಲಕ ಸಂವಿಧಾನ ರಕ್ಷಣೆಯ ಕಾರ್ಯ ನಡೆಸಿದೆ. ಹಾಗಾದರೆ ಬಿಜೆಪಿ ಅಂಬೇಡ್ಕರ್ ವಿರೋಧಿ ಹೇಗೆ ಎಂದವರು ಪ್ರಶ್ನಿಸಿದರು.

ದಲಿತರು ಅತೀ ಹೆಚ್ಚು ಮಾತದಾರರು ಇರುವ ಕಾರಣದಿಂದ ಅವರನ್ನು ಎತ್ತಿಕಟ್ಟುವ ಮೂಲಕ ಕಾಂಗ್ರೆಸ್ ವೋಟ್ ‌ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿದೆ. ಕಾಂಗ್ರೆಸ್ ಜೆಡಿಎಸ್‌ನವರು ಕುಟುಂಬ ರಾಜಕಾರಣದಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಯಾವತ್ತಿಗೂ ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಅವರು ಬಿಜೆಪಿಯಲ್ಲಿಯೂ ಡ್ರಗ್ ತೆಗೆದುಕೊಳ್ಳುವವರು ಇದ್ದಾರೆ ಎನ್ನುತ್ತಾರೆ. ಆದರೆ ಅವರು ಯಾರ ಹೆಸರನ್ನು ಹೇಳುವ ಧೈರ್ಯ ತೋರಿಲ್ಲ. ಯಾಕೆಂದರೆ ಬಿಜೆಪಿಯಲ್ಲಿ ಅಂತವರಿಲ್ಲ. ಆದರೆ, ಕಾಂಗ್ರೆಸ್‌ನ ನಾಯಕರೊಬ್ಬರ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ಬಂದಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಡಿ.ವಿನಯನೇತ್ರ ದಡ್ಡಲ್ ‌ಕಾಡ್ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಪಾಲಿಕೆ ಸದಸ್ಯರಾದ ಸುಽರ್ ಶೆಟ್ಟಿ ಕಣ್ಣೂರು, ಮನೋಜ್ ಕುಮಾರ್, ಭರತ್ ಕುಮಾರ್, ಬಿಜೆಪಿ ಪ್ರಮುಖರಾದ ಪ್ರಭಾ ಮಾಲಿನಿ, ದಿನಕರ ಬಾಬು, ಮಂಗಳಾ ಆಚಾರ್ಯ, ದಿನೇಶ್ ಅಮ್ಟೂರು, ಅಲ್ಲಿ ಎಲ್ತಿಮಾರ್ ಮುಂತಾದವರು ಉಪಸ್ಥಿತರಿದ್ದರು.

ಭೋಜರಾಜ್ ಕೋಟ್ಯಾನ್ ಸ್ವಾಗತಿಸಿದರು. ರಘುವೀರ್ ಬಾಬುಗುಡ್ಡ ರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News