ನಿರ್ಮಲಾ ಸೀತಾರಾಮನ್ ಬಗ್ಗೆ ಟಿಎಂಸಿ ಸಂಸದನ ಹೇಳಿಕೆ: ಬೇಷರತ್ ಕ್ಷಮೆ ಕೋರುವಂತೆ ಬಿಜೆಪಿ ಆಗ್ರಹ
ಹೊಸದಿಲ್ಲಿ, ಸೆ. 14: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಉದ್ದೇಶಿಸಿ ತೃಮಮೂಲ ಕಾಂಗ್ರೆಸ್ ಪಕ್ಷದ ಸಂಸದರೊಬ್ಬರು ವೈಯುಕ್ತಿಕ ಹೇಳಿಕೆ ನೀಡಿದ ಬಳಿಕ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಸದನದಲ್ಲಿ ಕೋಲಾಹಲ ಉಂಟಾಯಿತು.
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುಗತಾ ರಾಯ್ ಅವರು ತನ್ನ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆಗ್ರಹಿಸಿದರು. ಸುಗತಾ ರಾಯ್ ಅವರು ಲೋಕಸಭೆಯಲ್ಲಿ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆ ಕುರಿತು ಹೇಳಿಕೆ ನೀಡಿದ ಹಾಗೂ ಅದರ ವಿರುದ್ಧ ವಾದಿಸಿದ ಸಂದರ್ಭ ದೇಶದ ಆರ್ಥಿಕ ಪರಿಸ್ಥಿತಿಯು ವಿತ್ತ ಸಚಿವೆಯ ಚಿಂತೆಯನ್ನು ಹೆಚ್ಚಿಸಿರುವುದನ್ನು ಸೂಚಿಸುತ್ತದೆ ಎಂದರು. ಈ ಹೇಳಿಕೆಗೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಈ ಹೇಳಿಕೆಯನ್ನು ಕಡತದಿಂದ ಅಳಿಸಲಾಗಿದೆ ಎಂದು ತಿಳಿಸಿದರು. ಸುಗತಾ ರಾಯ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಅವರು, ಸುಗತಾ ರಾಯ್ ಅವರು ಇತರ ಅಂಶಗಳ ಬಗ್ಗೆ ಹೇಳಿಕೆ ಮಾತ್ರ ನೀಡುವ ಬದಲು ಆಲಿಸಿದ್ದರೆ ಉತ್ತಮವಾಗಿತ್ತು ಎಂದರು. ಈ ಹೇಳಿಕೆ ನೀಡುವ ಮೂಲಕ ಸುಗತಾ ರಾಯ್ ಅವರು ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಆಡಳಿತಾರೂಢ ಪಕ್ಷದ ಹಲವು ಸದಸ್ಯರು ಆರೋಪಿಸಿದರು.
“ಹಿರಿಯ ಸದಸ್ಯರಾಗಿದ್ದುಕೊಂಡು ವೈಯುಕ್ತಿಕ ವಿಚಾರಗಳ ಬಗ್ಗೆ ಹೇಳಿಕೆ ನೀಡುವುದೇ ?, ಅವರು ಏನು ಮಾತನಾಡುತ್ತಿದ್ದಾರೆ?, ಅವರು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು. ಇದು ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಪ್ರಹ್ಲಾದ ಜೋಷಿ ಹೇಳಿದರು. ಅದರೆ, ಇದಕ್ಕೆ ಸುಗತಾ ರಾಯ್ ಅವರು, ತಾನು ಯಾವುದೇ ಅಸಂಸದೀಯ ಹೇಳಿಕೆ ನೀಡಿಲ್ಲ ಎಂದರು.