ಅಧಿಕ ತೆರಿಗೆ ಹೊರೆಯಿಂದ ಬೇಸತ್ತು ಭಾರತದಲ್ಲಿ ವಿಸ್ತರಣಾ ಕಾರ್ಯ ಕೈಬಿಟ್ಟ ಟೊಯೊಟಾ

Update: 2020-09-15 06:07 GMT

ನವದೆಹಲಿ: ಭಾರತದಲ್ಲಿರುವ ಅಧಿಕ ತೆರಿಗೆ ನಿಯಮದಿಂದ ಅಸಮಾಧಾನಗೊಂಡಿರುವ ಟೊಯೊಟಾ ಮೋಟಾರ್ ಕಾರ್ಪ್ ತಾನು ಭಾರತದಲ್ಲಿ ಇನ್ನು ತನ್ನ ಕಂಪೆನಿಯ ವಿಸ್ತರಣಾ ಕಾರ್ಯ ಮುಂದುವರಿಸುವುದಿಲ್ಲವೆಂದು ಹೇಳಿದೆ. ಸರಕಾರವು ಕಾರುಗಳು ಹಾಗೂ ಮೋಟಾರ್ ಬೈಕುಗಳ ಮೇಲೆ ಎಷ್ಟೊಂದು ಅಧಿಕ ತೆರಿಗೆಗಳನ್ನು ವಿಧಿಸುತ್ತಿದೆಯೆಂದರೆ ಕಂಪೆನಿಗಳಿಗೆ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಲು ಕಷ್ಟವಾಗುತ್ತಿದೆ ಎಂದು ಟೊಯೋಟಾದ ಸ್ಥಳೀಯ ಘಟಕ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಹೇಳಿದ್ದಾರೆ. "ಅತ್ಯಧಿಕ ತೆರಿಗೆಯಿಂದಾಗಿ ಕಾರುಗಳು ಹಲವು ಗ್ರಾಹಕರ ಕೈಗೆಟಕುವುದಿಲ್ಲ, ಇದರಿಂದಾಗಿ ಫ್ಯಾಕ್ಟರಿಗಳಿಗೆ ಕೆಲಸವಿಲ್ಲದಂತಾಗುತ್ತದೆ ಹಾಗೂ ಉದ್ಯೋಗ ಸೃಷ್ಟಿಯಾಗುವುದಿಲ್ಲ," ಎಂದು ಅವರು ವಿವರಿಸಿದ್ದಾರೆ.

"ನಾವು ಇಲ್ಲಿಗೆ ಬಂದು ಇಲ್ಲಿ ಹೂಡಿಕೆ ಮಾಡಿದ ನಂತರ ನಮಗೆ ನೀವು ಬೇಡ ಎಂಬ ಸಂದೇಶ ದೊರಕುತ್ತಿದೆ, ನಾವು ಭಾರತವನ್ನು ತೊರೆಯುವುದಿಲ್ಲ ಆದರೆ ವಿಸ್ತರಣೆ ನಡೆಸುವುದಿಲ್ಲ,'' ಎಂದು ಅವರು ಸ್ಪಷ್ಟ ಪಡಿಸಿದರು.

ಜಗತ್ತಿನ ಅತ್ಯಂತ ದೊಡ್ಡ ಕಾರು ಉತ್ಪಾದನಾ ಕಂಪೆನಿಗಳಲ್ಲೊಂದಾಗಿರುವ ಟೊಯೊಟಾ ಭಾರತದಲ್ಲಿ 1997ರಲ್ಲಿ ಆರಂಭಗೊಂಡಿತ್ತು. ಅದರ ಸ್ಥಳೀಯ ಘಟಕದ ಶೇ. 89ರಷ್ಟು ಪಾಲುದಾರಿಕೆ ಜಪಾನಿ ಕಂಪೆನಿಯೇ ಹೊಂದಿದ್ದು ಮಾರುಕಟ್ಟೆಯಲ್ಲಿ ಅದರ ಪಾಲು ಈ ಹಿಂದೆ ಶೇ 5ರಷ್ಟಿದ್ದರೆ ಆಗಸ್ಟ್ ತಿಂಗಳಲ್ಲಿ ಶೇ 2.6ರಷ್ಟಾಗಿತ್ತು.

ಭಾರತದಲ್ಲಿ ತನ್ನ ಕಂಪೆನಿಯನ್ನು ಇನ್ನಷ್ಟು ವಿಸ್ತರಿಸದೇ ಇರಲು ಟೊಯೊಟಾ ಕೈಗೊಂಡ ನಿರ್ಧಾರವು ಜಾಗತಿಕ ಕಂಪೆನಿಗಳನ್ನು ಆಕರ್ಷಿಸಲು ಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಯತ್ನಕ್ಕೆ ಹಿನ್ನಡೆಯೆಂದೇ ತಿಳಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News