ಪಂಜಾಬ್: ಖಲಿಸ್ತಾನ್ ಪರ ಸಂಘಟನೆಯ ಇಬ್ಬರ ಸೆರೆ; ಶಸ್ತ್ರಾಸ್ತ್ರ ವಶಕ್ಕೆ

Update: 2020-09-15 13:33 GMT

ಚಂಡೀಗಢ, ಸೆ.15: ಶಸ್ತ್ರಾಸ್ತ್ರ ಸಹಿತ ಇಬ್ಬರನ್ನು ಬಂಧಿಸಲಾಗಿದ್ದು ಬಂಧಿತರು ಖಲಿಸ್ತಾನ್ ಪರ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ಹೇಳಿದ್ದಾರೆ.

ಖಲಿಸ್ತಾನ ಪರ ಸಂಘಟನೆಯ ಕೆಲವು ಸದಸ್ಯರು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳುಗೆಡವಲು ಸಂಚು ಹೂಡಿದ್ದಾರೆ ಎಂಬ ಖಚಿತ ಮಾಹಿತಿಯನ್ವಯ ರಾಜ್ಯವನ್ನು ಪ್ರವೇಶಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಬಿಗು ತಪಾಸಣೆ ಕೈಗೊಳ್ಳಲಾಗಿದೆ.

ರಾಜ್‌ಪುರ-ಸಿರ್‌ಹಿಂಡ್ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಶಂಕೆಯ ಮೇರೆಗೆ ಹರ್ಜೀತ್ ಸಿಂಗ್ ಅಲಿಯಾಸ್ ರಾಜು ಮತ್ತು ಶಂಶೇರ್ ಸಿಂಗ್ ಆಲಿಯಾಸ್ ಶೇರಾ ಎಂಬವರನ್ನು ಬಂಧಿಸಲಾಗಿದೆ ಎಂದು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ ಹೇಳಿದ್ದಾರೆ. ಬಂಧಿತರಿಂದ .32 ಕ್ಷಮತೆಯ 4 ಪಿಸ್ತೂಲ್‌ಗಳು, ಒಂದು 9 ಎಂಎಂ ಪಿಸ್ತೂಲ್, ಒಂದು .32 ರಿವಾಲ್ವರ್, ಎಂಟು ಸುತ್ತುಗಳಷ್ಟು ಮದ್ದುಗುಂಡು, 7 ಮೊಬೈಲ್ ಫೋನ್‌ಗಳು, ಒಂದು ಇಂಟರ್‌ನೆಟ್ ಡಾಂಗಲ್ ವಶಕ್ಕೆ ಪಡೆಯಲಾಗಿದೆ.

 ಈ ಶಸ್ತ್ರಾಸ್ತಗಳನ್ನು ಬರ್ಹಾನ್‌ಪುರ, ಮಧ್ಯಪ್ರದೇಶ, ಸಫಿದಾನ್ ಮತ್ತು ಹರ್ಯಾಣದ ಜಿಂದ್ ಜಿಲ್ಲೆಯಿಂದ ವಶಕ್ಕೆ ಪಡೆಯಲಾಗಿದೆ. ಪಂಜಾಬ್‌ನಲ್ಲಿ ಐವರು ಕುಖ್ಯಾತ ಕ್ರಿಮಿನಲ್‌ಗಳ ನೆರವು ಪಡೆದು ಭಾರೀ ಭಯೋತ್ಪಾದಕ ದಾಳಿ ನಡೆಸಲು ಸಂಚು ಹೂಡಿದ್ದರು. ಈ ಐವರು ಕ್ರಿಮಿನಲ್‌ಗಳಲ್ಲಿ ಶುಭದೀಪ್ ಸಿಂಗ್ ಎಂಬಾತ ಖಲಿಸ್ತಾನ್ ಜಿಂದಾಬಾದ್ ಪಡೆಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ. ಈತನನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News