ಮಾಧ್ಯಮಗಳ ವರದಿಗಾರಿಕೆಗೆ ನಿರ್ಬಂಧ ಕೋರಿ ಅರ್ಜಿ ಸಲ್ಲಿಕೆ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್

Update: 2020-09-15 14:58 GMT

ಮುಂಬೈ,ಸೆ.15: ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಅವರ ಸಾವು ಮತ್ತು ಪ್ರಕರಣದ ತನಿಖೆಗೆ ಸಂಬಂಧಿಸಿದ ವರದಿಗಳನ್ನು ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸುವಂತೆ ಕೋರಿ ಎನ್‌ಜಿಒ ’ಇನ್ ಪರ್ಸ್ಯೂಟ್ ಆಫ್ ಜಸ್ಟೀಸ್’ ಸಲ್ಲಿಸಿರುವ ಅರ್ಜಿಯ ಕುರಿತು ಬಾಂಬೆ ಉಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ. ಇದು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಇಂತಹ ಮೂರನೇ ಅರ್ಜಿಯಾಗಿದೆ.

ಪುಣೆ ಮೂಲದ ಚಿತ್ರ ನಿರ್ಮಾಪಕ ನಿಲೇಶ ನವ್ಲಾಖಾ ಮತ್ತು ಇತರ ಇಬ್ಬರು ಹಾಗೂ ರಾಜ್ಯದ ಎಂಟು ಮಾಜಿ ಪೊಲೀಸ್ ಅಧಿಕಾರಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ದೀಪಂಕರ್ ದತ್ತಾ ಅವರ ನೇತೃತ್ವದ ಪೀಠವು ಈಗಾಗಲೇ ನಡೆಸುತ್ತಿದೆ.

ಇದೀಗ ನ್ಯಾಯಾಲಯವು ಈ ಮೂರೂ ಅರ್ಜಿಗಳನ್ನು ಒಂದು ಗುಚ್ಛವಾಗಿ ಪರಿಗಣಿಸಿದ್ದು,ಅ.8ರಂದು ಜಂಟಿ ವಿಚಾರಣೆಯನ್ನು ನಡೆಸಲಿದೆ.

ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಕಾನೂನಿನ ಆಡಳಿತಕ್ಕೆ ಅಡ್ಡಿಯನ್ನುಂಟು ಮಾಡುವ ಯಾವುದೇ ಅಡಚಣೆಗಳನ್ನು ಸೇರಿಸಲು ನ್ಯಾಯಾಂಗ ನಿಂದನೆ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಕೋರಿರುವ ಎನ್‌ಜಿಒ,ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯು ಅಂತಿಮವಾಗಿ ಇತ್ಯರ್ಥವಾಗುವವರೆಗೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವುದನ್ನು ಅಥವಾ ಪ್ರಸಾರವಾಗುವುದನ್ನು ನಿರ್ಬಂಧಿಸುವಂತೆಯೂ ಕೋರಿದೆ.

ಮಾಧ್ಯಮಗಳು ಈಗಾಗಲೇ ಸುಶಾಂತ್ ಅವರ ವೈಯಕ್ತಿಕ ಚಾಟ್‌ಗಳು,ಆರೋಪಿ ಮತ್ತು ಆಸ್ಪತ್ರೆ ಸಿಬ್ಬಂದಿಗಳ ಹೇಳಿಕೆಗಳನ್ನು ಪ್ರಕಟಿಸಿವೆ ಮತ್ತು ಈಗಾಗಲೇ ಆರೋಪಿಗಳ ‘ವಿಚಾರಣೆ ನಡೆಸಿ ದೋಷನಿರ್ಣಯ’ವನ್ನೂ ಮಾಡಿವೆ. ಆರೋಪಿಗಳನ್ನು ಕೊಲೆಗಾರ/ಕೊಲೆಗಾರ್ತಿ,ಪ್ರಚೋದಕ ಇತ್ಯಾದಿ ಹೆಸರುಗಳಿಂದ ಬಣ್ಣಿಸಿವೆ ಎಂದು ಹೇಳಿರುವ ಅರ್ಜಿಯು,ಇಂತಹ ವರದಿಗಾರಿಕೆಗಳು ಸಂಬಂಧಿಸಿದ ವ್ಯಕ್ತಿಗಳ ಹಕ್ಕುಗಳನ್ನು ಉಲ್ಲಂಘಿಸಿವೆ ಮತ್ತು ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ ಎಂದು ವಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News