ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ತರಬೇತಿ ನೀಡಲಿರುವ ಮುಂಬೈನ ಮದ್ರಸ

Update: 2020-09-15 16:13 GMT
ಸಾಂದರ್ಭಿಕ ಚಿತ್ರ

ಮುಂಬೈ,ಸೆ.15: ಭಾರತದಲ್ಲಿ ಪ್ರಾಯಶಃ ಇದೇ ಮೊದಲ ಬಾರಿಗೆ ಮದ್ರಸವೊಂದು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯ ಆಕಾಂಕ್ಷಿಗಳಾಗಿರುವ ಅಲ್ಪಸಂಖ್ಯಾತ ವರ್ಗದ ಸುಮಾರು 200 ಅಭ್ಯರ್ಥಿಗಳಿಗೆ ನೇಮಕಾತಿ ಪೂರ್ವದ ಉಚಿತ ತರಬೇತಿಯನ್ನು ನೀಡಲು ಖಾಸಗಿ ಕೋಚಿಂಗ್ ಸೆಂಟರ್‌ವೊಂದನ್ನು ನಿಯೋಜಿಸಿದೆ. ನಗರದ ಗ್ರಾಂಟ್ ರೋಡ್‌ನಲ್ಲಿರುವ ಮದ್ರಸ ಜಾಮಿಯಾ ಅಶ್ರಫಿಯಾ ಖಾದ್ರಿಯಾ ಮೂರು ತಿಂಗಳ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲಿದೆ.

 ಪೊಲೀಸ್ ಇಲಾಖೆಯಲ್ಲಿ ಅಲ್ಪಸಂಖ್ಯಾತರ,ವಿಶೇಷವಾಗಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವ ಬಗ್ಗೆ ಕಳವಳಗೊಂಡಿರುವ ಜಾಮಿಯಾ ಅಶ್ರಫಿಯಾ ಖಾದ್ರಿಯಾ ಮದ್ರಸದ ಮುಖ್ಯಸ್ಥ ಮೌಲಾನಾ ಮೊಯಿನ್ ಅಶ್ರಫ್ ಖಾದ್ರಿ,ಶಾಸಕ ಅಮಿನ್ ಪಟೇಲ್ ಮತ್ತು ಸಾಮಾಜಿಕ ಕಾರ್ಯಕರ್ತ ಎಂ.ಎ.ಖಾಲಿದ್ ಅವರು ಇತ್ತೀಚಿಗೆ ಸಭೆ ಸೇರಿ 200 ಯುವಕರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಮದ್ರಸ ಮುಂದಾಳತ್ವ ವಹಿಸಬೇಕು ಎಂದು ನಿರ್ಧರಿಸಿದ್ದರು.

ರಾಜ್ಯದ ಎಲ್ಲ 36 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಭ್ಯರ್ಥಿಗಳಿಗಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯು ನಡೆಸುತ್ತಿರುವ ತರಬೇತಿ ಶಿಬಿರಗಳಿಂದ ಮದ್ರಸದ ತರಬೇತಿಯು ಪ್ರತ್ಯೇಕವಾಗಿದೆ.

ತರಬೇತಿಗೆ ಸೇರುವ ಅಭ್ಯರ್ಥಿಗಳಿಗೆ ಮದ್ರಸದಿಂದ ಉಚಿತ ವಸತಿ-ಆಹಾರವನ್ನು ಒದಗಿಸಲಾಗುವುದು. ಕೆಲವು ವ್ಯಕ್ತಿಗಳು ಈ ಕಾರ್ಯಕ್ರಮಕ್ಕಾಗಿ ದೇಣಿಗೆಗಳನ್ನು ನೀಡುವ ಮೂಲಕ ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದು ಖಾದ್ರಿ ತಿಳಿಸಿದರು.

 ಅಲ್ಪಸಂಖ್ಯಾತರ ಉತ್ತಮ ಪ್ರಾತಿನಿಧ್ಯವು ವಿಶ್ವಾಸ ನಿರ್ಮಾಣಕ್ಕೆ ಮತ್ತು ಪೊಲೀಸರ ಕುರಿತು ತಪ್ಪುಗ್ರಹಿಕೆಗಳನ್ನು ನಿವಾರಿಸಲು ನೆರವಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯುಂಟಾದಾಗ ಸಮುದಾಯಗಳ ನಡುವೆ ಮಾತುಕತೆಗಳನ್ನು ನಡೆಸಲು ಮತು ಸ್ಥಿತಿಯನ್ನು ನಿಯಂತ್ರಣದಲ್ಲಿರಿಸಲು ವಿವಿಧ ಸಮುದಾಯಗಳಿಗೆ ಸೇರಿದ ಕಾನ್‌ಸ್ಟೇಬಲ್‌ಗಳ ನಿಯೋಜನೆ ನೆರವಾಗುತ್ತದೆ ಎಂದು ಐಜಿಪಿ (ಮಾನವ ಹಕ್ಕುಗಳ ರಕ್ಷಣೆ) ಖೈಸರ್ ಖಾಲಿದ್ ಹೇಳಿದರು.

ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಲ್ಲಿ ಮುಸ್ಲಿಮರ ಕಳಪೆ ಪ್ರಾತಿನಿಧ್ಯಕ್ಕೆ ಮರಾಠಿಯಲ್ಲಿ ಅವರ ದೌರ್ಬಲ್ಯ ಮುಖ್ಯ ಕಾರಣಗಳಲ್ಲೊಂದಾಗಿದೆ ಎಂದು ಎಂ.ಎ.ಖಾಲಿದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News