ನೀವು ಲೆಕ್ಕ ಮಾಡಿಲ್ಲ ಅಂದರೆ ವಲಸೆ ಕಾರ್ಮಿಕರು ಯಾರೂ ಸತ್ತಿಲ್ಲ ಎಂದು ಅರ್ಥವೇ ?: ರಾಹುಲ್ ಗಾಂಧಿ

Update: 2020-09-15 17:04 GMT

ಹೊಸದಿಲ್ಲಿ, ಸೆ. 15: ಲಾಕ್‌ಡೌನ್ ಸಂದರ್ಭ ಮೃತಪಟ್ಟ ವಲಸೆ ಕಾರ್ಮಿಕರ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿರುವ ಕೇಂದ್ರ ಸರಕಾರವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಗತ್ತೇ ವಲಸೆ ಕಾರ್ಮಿಕರ ಸಾವನ್ನು ನೋಡಿದೆ. ಆದರೆ, ಮೋದಿ ಸರಕಾರಕ್ಕೆ ಮಾತ್ರ ಅದರ ಅರಿವಿಲ್ಲ ಎಂದಿದ್ದಾರೆ. ಲಾಕ್‌ಡೌನ್ ಕಾರಣದಿಂದ ತಮ್ಮ ತವರೂರಿಗೆ ಮರಳಿದ ವಲಸೆ ಕಾರ್ಮಿಕರಲ್ಲಿ ಸಾವನ್ನಪ್ಪಿದ ಹಾಗೂ ಗಾಯಗೊಂಡವರ ಮಾಹಿತಿ ಸರಕಾರದ ಬಳಿ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಸೋಮವಾರ ಲೋಕಸಭೆಗೆ ತಿಳಿಸಿದ್ದರು.

ಲಾಕ್‌ಡೌನ್ ಸಂದರ್ಭ ಎಷ್ಟು ವಲಸೆ ಕಾರ್ಮಿಕರು ಸಾವನ್ನಪ್ಪಿದರು ಹಾಗೂ ಎಷ್ಟು ಮಂದಿ ಉದ್ಯೋಗ ಕಳೆದುಕೊಂಡರು ಎಂಬ ಬಗ್ಗೆ ಮೋದಿ ಸರಕಾರಕ್ಕೆ ಗೊತ್ತಿಲ್ಲ ಎಂದು ರಾಹುಲ್ ಗಾಂಧಿ 4 ಸಾಲುಗಳ ಪದ್ಯದಲ್ಲಿ ಹೇಳಿದ್ದಾರೆ. ನೀವು ಲೆಕ್ಕ ಮಾಡದೇ ಇದ್ದರೆ, ಸಾವು ಸಂಭವಿಸಿಲ್ಲ ಎಂದು ಅರ್ಥವೇ ? ವಲಸೆ ಕಾರ್ಮಿಕರ ಸಾವು ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದಿರುವುದು ವಿಷಾದಕರ. ಜಗತ್ತು ವಲಸೆ ಕಾರ್ಮಿಕರ ಸಾವನ್ನು ನೋಡಿದೆ. ಆದರೆ, ಮೋದಿ ಸರಕಾರಕ್ಕೆ ಮಾತ್ರ ಅದರ ಬಗ್ಗೆ ಅರಿವಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಭಾರತದ ಮೇಲೆ ಚೀನಾ ಅತಿಕ್ರಮಣ ಮಾಡಿದೆ ಎಂಬ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ದಾರಿ ತಪ್ಪಿಸಿರುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ನಮ್ಮ ದೇಶ ಸದಾ ಭಾರತೀಯ ಸೇನೆ ಜೊತೆ ನಿಂತಿದೆ. ಎಂದಿಗೂ ನಿಲ್ಲುತ್ತದೆ. ಆದರೆ, ಮೋದಿ ಅವರೇ ನೀವು ಯಾವಾಗ ಚೀನಾದ ವಿರುದ್ಧ ನಿಲ್ಲುತ್ತೀರಿ ? ಚೀನಾದ ಕೈಯಿಂದ ನಮ್ಮ ಭೂಭಾಗವನ್ನು ಯಾವಾಗ ವಾಪಾಸು ಪಡೆಯುತ್ತೀರಿ ? ಚೀನಾದ ಹೆಸರು ಉಲ್ಲೇಖಿಸಲು ಭಯಪಡಬೇಡಿ.

ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News