ನನಗೆ ಕರೆ ಮಾಡಿ, ನಾನು ಬರುತ್ತೇನೆ, ಎಲ್ಲಿಯಾದರೂ ಕ್ರಿಕೆಟ್ ಆಡುತ್ತೇನೆ

Update: 2020-09-15 18:24 GMT

ಕೊಚ್ಚಿ, ಸೆ.15: ವೇಗದ ಬೌಲರ್ ಎಸ್. ಶ್ರೀಶಾಂತ್ '' ನನಗೆ ಕರೆ ಮಾಡಿ ಮತ್ತು ನಾನು ಎಲ್ಲಿಯಾದರೂ ಬಂದು ಕ್ರಿಕೆಟ್ ಆಡುತ್ತೇನೆ ''ಎಂದು ಹೇಳಿದ್ದಾರೆ.

2007ರ ವಿಶ್ವ ಟ್ವೆಂಟಿ-20 ಮತ್ತು 2011ರ ವಿಶ್ವಕಪ್ ವಿಜೇತ ಭಾರತದ ತಂಡಗಳ ಭಾಗವಾಗಿದ್ದ ಶ್ರೀಶಾಂತ್ ಐಪಿಎಲ್‌ನಲ್ಲಿ ಫಿಕ್ಸಿಂಗ್ ಆರೋಪದಲ್ಲಿ ಏಳು ವರ್ಷಗಳ ನಿಷೇಧದಿಂದ ಇತ್ತೀಚೆಗೆ ಹೊರ ಬಂದಿದ್ದರು. ''ನಾನು ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಮತ್ತು ಶ್ರೀಲಂಕಾದ ದೇಶಗಳಲ್ಲಿನ ಕ್ಲಬ್ ಮಟ್ಟದಲ್ಲಿ ಕ್ರಿಕೆಟ್ ಆಡಲು ಬಯಸುತ್ತೇನೆ . ಈ ಬಗ್ಗೆ ಅಲ್ಲಿನ ಏಜೆಂಟರೊಂದಿಗೆ ಮಾತನಾಡುತ್ತಿದ್ದೇನೆ. 2023ರ ವಿಶ್ವಕಪ್‌ನಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ನನ್ನ ಗುರಿ'' ಎಂದು ಹೇಳಿದ್ದಾರೆ.   

2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ್ನು ಬೆಚ್ಚಿ ಬೀಳಿಸಿದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಗಸ್ಟ್ 2013 ರಲ್ಲಿ ಶ್ರೀಶಾಂತ್ ಅವರಿಗೆ ಆಜೀವ ನಿಷೇಧ ಹೇರಿತ್ತು. 2015ರಲ್ಲಿ ದಿಲ್ಲಿಯ ವಿಶೇಷ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಶ್ರೀಶಾಂತ್‌ರನ್ನು ಖುಲಾಸೆಗೊಳಿಸಿತ್ತು. 2018ರಲ್ಲಿ ಕೇರಳ ಹೈಕೋರ್ಟ್ ಶ್ರೀಶಾಂತ್‌ಗೆ ಬಿಸಿಸಿಐ ವಿಧಿಸಿದ್ದ ಜೀವಾವಧಿ ನಿಷೇಧವನ್ನು ರದ್ದುಗೊಳಿಸಿತ್ತು. ಆದರೆ ಹೈಕೋರ್ಟ್‌ನ ವಿಭಾಗೀಯ ಪೀಠವು ನಿಷೇಧವನ್ನು ಎತ್ತಿ ಹಿಡಿದಿತ್ತು. ಶ್ರೀಶಾಂತ್ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್ ಅವರ ತಪ್ಪನ್ನು ಎತ್ತಿಹಿಡಿದಿದೆ. ಆದರೆ ಬಿಸಿಸಿಐಗೆ ಅವರ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲು ಕೇಳಿಕೊಂಡಿತ್ತು. ನಂತರ ಬಿಸಿಸಿಐ ಅವರ ಜೀವಾವಧಿ ನಿಷೇಧವನ್ನು ಏಳು ವರ್ಷಗಳಿಗೆ ಇಳಿಸಿತು. ಅದು ಸೆಪ್ಟೆಂಬರ್ 12ರಂದು ಕೊನೆಗೊಂಡಿತು.

  37ರ ಹರೆಯದ ಶ್ರೀಶಾಂತ್ ಭಾರತದ ಪರ 27 ಟೆಸ್ಟ್, 53 ಏಕದಿನ ಮತ್ತು 10ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 87, 75 ಮತ್ತು 7 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News