ಥಾಮಸ್-ಉಬರ್ ಕಪ್ ಮುಂದೂಡಿಕೆ

Update: 2020-09-15 18:28 GMT

ಹೊಸದಿಲ್ಲಿ: ಡೆನ್ಮಾರ್ಕ್ ನಲ್ಲಿ ನಿಗದಿಯಾಗಿದ್ದ ಥಾಮಸ್ ಮತ್ತು ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಉನ್ನತ ತಂಡಗಳು ಹಿಂದೆ ಸರಿದ ಹಿನ್ನೆಲೆಯಲ್ಲಿ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಈ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡಿರುವುದನ್ನು ಇಂದು ಪ್ರಕಟಿಸಿದೆ.

 ಅಕ್ಟೋಬರ್ 3ರಿಂದ 11ರವರೆಗೆ ಡೆನ್ಮಾರ್ಕ್‌ನ ಆರ್ಹಸ್‌ನಲ್ಲಿ ನಡೆಯಬೇಕಿದ್ದ ಪ್ರತಿಷ್ಠಿತ ಟೂರ್ನಿಗಾಗಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳನ್ನು ಘೋಷಿಸಿತ್ತು.

  ಈ ನಡುವೆ ಇಂಡೋನೇಷ್ಯ, ದಕ್ಷಿಣ ಕೊರಿಯಾ ,ಥಾಯ್‌ಲ್ಯಾಂಡ್, ಆಸ್ಟ್ರೇಲಿಯ, ಚೈನಾ ತೈಪೆ ಮತ್ತು ಅಲ್ಜೀರಿ ದೇಶಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದ ಬಳಿಕ ಬಿಡಬ್ಲ್ಯುಎಫ್ ಆಡಳಿತ ಮಂಡಳಿ ರವಿವಾರ ವರ್ಚುವಲ್ (ವಾಸ್ತವಿಕ) ತುರ್ತು ಸಭೆ ಸೇರಿತು.

 ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಮತ್ತು ಡೆನ್ಮಾರ್ಕ್‌ನ ಆತಿಥೇಯ ಬ್ಯಾಡ್ಮಿಂಟನ್ ಸಂಸ್ಥೆಯೊಂದಿಗೆ ಸಮಾಲೋಚನೆ ನಡೆಸಿ ಡೆನ್ಮಾರ್ಕ್ ನ ಆರ್ಹಸ್‌ನಲ್ಲಿ ನಡೆಯುವ ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್ 2020ನ್ನು ಮುಂದೂಡಲು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಬಿಡಬ್ಲುಎಫ್ ಹೇಳಿಕೆಯಲ್ಲಿ ತಿಳಿಸಿದೆ.

   ಭಾರತದ ಸೈನಾ ನೆಹ್ವಾಲ್ ರವಿವಾರ ಈವೆಂಟ್‌ನ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಕೊರೋನ ವೈರಸ್ ಸೋಂಕು ನಡುವೆ ಈ ಪಂದ್ಯಾವಳಿಯನ್ನು ಆಯೋಜಿಸುವುದು ಸೂಕ್ತವೇ? ಎಂದು ಪ್ರಶ್ನಿಸಿದ್ದರು.

ಸೈನಾ, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಉಬರ್ ಕಪ್‌ನಲ್ಲಿ 10 ಸದಸ್ಯರ ಮಹಿಳಾ ತಂಡವನ್ನು ಮುನ್ನಡೆಸಬೇಕಿದ್ದರೆ, ಮಾಜಿ ವಿಶ್ವದ ನಂ .1 ಕಿಡಂಬಿ ಶ್ರೀಕಾಂತ್ ಥಾಮಸ್ ಕಪ್‌ನಲ್ಲಿ ಭಾರತದ ಪುರುಷರ ತಂಡದ ಅಭಿಯಾನವನ್ನು ಮುನ್ನಡೆಸಲಿದ್ದರು.

ಕೆಲವು ದಿನಗಳ ಹಿಂದೆ ಭಾರತದ ಕ್ರೀಡಾ ಪ್ರಾಧಿಕಾರ ನಿಗದಿಪಡಿಸಿದ ಸಂಪರ್ಕತಡೆಯನ್ನು ಅನುಸರಿಸಲು ಆಟಗಾರರು ನಿರಾಕರಿಸಿದ್ದರಿಂದ ತಂಡದ ಸಿದ್ಧತೆಗಳು ಸುಗಮವಾಗಿ ನಡೆಯುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News