ಕೇಂದ್ರ ಸರಕಾರದ ಬಳಿ ಇಲ್ಲದ ಮೃತ ವಲಸೆ ಕಾರ್ಮಿಕರ ಮಾಹಿತಿ ಈ ವೆಬ್‌ಸೈಟ್‌ನಲ್ಲಿದೆ!

Update: 2020-09-16 06:08 GMT

ಹೊಸದಿಲ್ಲಿ: ಸೋಮವಾರ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್, ಲಾಕ್ ಡೌನ್ ವೇಳೆ ತಮ್ಮ ಊರುಗಳಿಗೆ ಮರಳುತ್ತಿದ್ದ ವೇಳೆ ಮೃತಪಟ್ಟ ವಲಸಿಗ ಕಾರ್ಮಿಕರ ಕುರಿತಾದ ಯಾವುದೇ ದಾಖಲೆಗಳು ಸರಕಾರದ ಬಳಿಯಿಲ್ಲ ಎಂದು ಹೇಳಿದ್ದರು.

ಆದರೆ ಈ ಕುರಿತಾದ ಮಾಹಿತಿ ಕಲೆ ಹಾಕಿದ ಕೆಲ ಇತರರ ಸಹಾಯವನ್ನು ಕೇಂದ್ರ ಸಚಿವರು ಪಡೆಯಬಹುದಾಗಿತ್ತು. ನಾಲ್ಕು ಮಂದಿ ಸ್ವಯಂಪ್ರೇರಣೆಯಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಮಾರ್ಚ್ 14  ಹಾಗೂ ಜುಲೈ 4, 2020ರ ನಡುವೆ 906 ವಲಸಿಗ ಕಾರ್ಮಿಕರು ಮೃತಪಟ್ಟಿದ್ದಾರೆ.

 ಜಿಂದಾಲ್ ಗ್ಲೋಬಲ್ ಸ್ಕೂಲ್ ಆಫ್ ಲಾ ಇಲ್ಲಿನ ಸಹಾಯಕ ಪ್ರೊಫೆಸರ್ ಅಮನ್,  ಸಾರ್ವಜನಿಕ ಹಿತಾಸಕ್ತಿ ತಂತ್ರಜ್ಞೆ ತೇಜೇಶ್ ಜಿ ಎನ್,  ಎಮೊರಿ ವಿವಿ, ಜಾರ್ಜಿಯಾ ಇಲ್ಲಿನ ಡಾಕ್ಟರೇಟ್ ವಿದ್ಯಾರ್ಥಿನಿ ಕನಿಕಾ ಶರ್ಮ ಹಾಗೂ ನೂಯಾರ್ಕ್‍ನ ಸಿರಾಕುಸ್ ವಿವಿಯ ಆರ್ ಕೃಷ್ಣ ಅವರು ಸಂಗ್ರಹಿಸಿರುವ ಮಾಹಿತಿ  thejeshgn.com ಎಂಬ ವೆಬ್ ತಾಣದಲ್ಲಿ ಲಭ್ಯವಿದೆ.

ಇಲ್ಲಿರುವ ಅಂಕಿಅಂಶಗಳಂತೆ ಗರಿಷ್ಠ ವಲಸಿಗ ಕಾರ್ಮಿಕರು, ಅಂದರೆ 216 ಮಂದಿ ಮಾರ್ಚ್ 14 ಹಾಗೂ ಜುಲೈ 14ರ ನಡುವೆ ಹಸಿವು ಹಾಗೂ ಆರ್ಥಿಕ ಅಡಚಣೆಯ ಜಂಟಿ ಕಾರಣಗಳಿಂದಾಗಿ ಮೃತಪಟ್ಟಿದ್ದರೆ,  ಲಾಕ್‍ಡೌನ್ ಸಂದರ್ಭ ರೈಲು ಯಾ ರಸ್ತೆ ಅಪಘಾತಗಳಿಂದ ಅಥವಾ ರಸ್ತೆ ಮೂಲಕ ನಡೆದುಕೊಂಡು ಸಾಗಿದ ಸಂದರ್ಭ  209 ಮಂದಿ ಸಾವನ್ನಪ್ಪಿದ್ದಾರೆ.

ಈ ವೆಬ್ ತಾಣದಲ್ಲಿರುವ ಮಾಹಿತಿಯಲ್ಲಿ ಮೃತರ ಹೆಸರು, ಸಾವನ್ನಪ್ಪಿದ ದಿನಾಂಕ, ಜಿಲ್ಲೆ ಹಾಗೂ ವೃತ್ತಿ ಕೂಡ ಉಲ್ಲೇಖಗೊಂಡಿದೆ. 47 ಮಂದಿ ತಮ್ಮ ಊರುಗಳಿಗೆ ತೆರಳುವಾಗ ಸುದೀರ್ಘ ಅವಧಿ ತನಕ ನಡೆದು ನಿತ್ರಾಣಗೊಂಡು ಯಾ ಉದ್ದನೆಯ ಸರತಿಯಲ್ಲಿ ನಿಂತು ತೀವ್ರ ಸುಸ್ತಿನಿಂದ ಸಾವನ್ನಪ್ಪಿದ್ದಾರೆ ಹಾಗೂ 49 ಮಂದಿ ವಲಸಿಗರು ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಗೂ 18 ಮಂದಿ ಲಾಕ್ ಡೌನ್‍ಗೆ ಸಂಬಂಧಿಸಿದ ಅಪರಾಧಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಇಲ್ಲಿ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News