ಭಾರತ-ಚೀನಾ ಗಡಿಯಲ್ಲಿ ನುಸುಳುವಿಕೆ ಪ್ರಕರಣಗಳು ನಡೆದಿಲ್ಲ: ಕೇಂದ್ರ ಗೃಹ ಸಚಿವಾಲಯ

Update: 2020-09-16 16:15 GMT

ಹೊಸದಿಲ್ಲಿ, ಸೆ. 16: ಕಳೆದ 6 ತಿಂಗಳಲ್ಲಿ ಭಾರತ-ಚೀನಾ ಗಡಿಯ ಮೂಲಕ ಯಾವುದೇ ನುಸುಳುವಿಕೆ ಪ್ರಕರಣಗಳು ನಡೆದಿಲ್ಲ ಎಂದು ಸರಕಾರ ಬುಧವಾರ ರಾಜ್ಯ ಸಭೆಗೆ ತಿಳಿಸಿದೆ.

‘ಕಳೆದ 6 ತಿಂಗಳಿಂದ ಪಾಕಿಸ್ತಾನ ಹಾಗೂ ಚೀನಾದಿಂದ ಒಳನುಸುಳುವಿಕೆ ಪ್ರಕರಣಗಳು ಹೆಚ್ಚುತ್ತಿವೆ ಎಂಬುದು ಸತ್ಯವೇ ?’ ಎಂಬ ಬಿಜೆಪಿ ಸಂಸದ ಡಾ. ಅನಿಲ್ ಅಗರ್ವಾಲ್ ಅವರು ಲಿಖಿತವಾಗಿ ಪ್ರಶ್ನಿಸಿದರು. ಇದಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, ಕಳೆದ 6 ತಿಂಗಳಿಂದ ಭಾರತ-ಚೀನಾ ಗಡಿಯ ಮೂಲಕ ಯಾವುದೇ ನುಸುಳುವಿಕೆ ಪ್ರಯತ್ನ ನಡೆದಿಲ್ಲ. ಆದರೆ, ಫೆಬ್ರವರಿಯಿಂದ ಭಾರತ-ಪಾಕಿಸ್ತಾನ ಗಡಿಯಲ್ಲಿ 47 ಬಾರಿ ಒಳನುಸುಳುವಿಕೆಯ ಪ್ರಯತ್ನಗಳು ನಡೆದಿವೆ ಎಂದರು.

ಕಳೆದ 3 ವರ್ಷಗಳಲ್ಲಿ ಪಾಕಿಸ್ತಾನದ ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು 594 ಬಾರಿ ಪ್ರಯತ್ನಿಸಿದ್ದಾರೆ. ಅದರಲ್ಲಿ 312 ಬಾರಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಕಳೆದ 3 ವರ್ಷಗಳಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಭದ್ರತಾ ಪಡೆ 562 ಶಂಕಿತ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಇದೇ ಅವಧಿಯಲಿ 46 ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ಮತ್ತೋರ್ವ ಸಹಾಯಕ ಸಚಿವ ಜಿ. ಕೃಷ್ಣಾ ರೆಡ್ಡಿ ರಾಜ್ಯ ಸಭೆಗೆ ತಿಳಿಸಿದರು.

ಪೂರ್ವ ಲಡಾಕ್‌ನಲ್ಲಿ ಮೇಯಿಂದ ಚೀನಾದ ಪಿಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹಾಗೂ ಭಾರತೀಯ ಸೇನೆ ನಡುವೆ ನಿರಂತರ ಬಿಕ್ಕಟ್ಟು ಮುಂದುವರಿಯುತ್ತಿರುವ ನಡುವೆ ಅವರು ನೀಡಿದ ಈ ಹೇಳಿಕೆ ವಿವಾದ ಹುಟ್ಟು ಹಾಕಿದೆ. ಯಾವುದೇ ರೀತಿಯ ಅತಿಕ್ರಮಣಗಳು ಇಲ್ಲದೇ ಇದ್ದಿದ್ದರೆ, ಎಪ್ರಿಲ್‌ನಲ್ಲಿ ನಡೆದ ರಾಜತಾಂತ್ರಿಕ ಹಾಗೂ ಸೇನಾ ಸಭೆಗಳಲ್ಲಿ ಗಡಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಭಾರತ ಆಗ್ರಹಿಸುವ ಅಗತ್ಯ ಏನಿತ್ತು ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News