ದಿಲ್ಲಿ ಪೊಲೀಸರಿಂದ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯದ ನಿಗ್ರಹ: ಸಾಮಾಜಿಕ ಹೋರಾಟಗಾರರ ಗುಂಪು ಆರೋಪ

Update: 2020-09-16 16:15 GMT

ಹೊಸದಿಲ್ಲಿ, ಸೆ. 16: ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾದ ಸಾಮಾಜಿಕ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸಾಮಾಜಿಕ ಹೋರಾಟಗಾರರ ಗುಂಪಿನ ಹೇಳಿಕೆ ಆಗ್ರಹಿಸಿದೆ.

ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸುವಂತೆ ಹಾಡುಹಗಲೇ ಬೆದರಿಕೆ ಒಡ್ಡಿದ್ದ, ಪ್ರತಿಭಟನಾ ಸ್ಥಳಕ್ಕೆ ಬಂದೂಕುಗಳೊಂದಿಗೆ ಆಗಮಿಸಿದ್ದ, ಉತ್ತೇಜನಕಾರಿ ಹಾಗೂ ಹಿಂಸಾಚಾರ ಪ್ರೇರೇಪಿಸುವ ಘೋಷಣೆಗಳನ್ನು ಕೂಗಿದ ನಿಜವಾದ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಆದರೆ, ಭಿನ್ನಾಭಿಪ್ರಾಯದ ಪ್ರಜಾಸತ್ತಾತ್ಮಕವಾದ ಎಲ್ಲ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ದಿಲ್ಲಿಯ ಜೆಎನ್‌ಯು ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು ಯುಎಪಿಎ ಅಡಿಯಲ್ಲಿ ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ಬಂಧಿಸಿದ ಕೆಲವು ದಿನಗಳ ಬಳಿಕ ಸಾಮಾಜಿಕ ಹೋರಾಟಗಾರರು ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಹೇಳಿಕೆಗೆ ಸಹಿ ಹಾಕಿದವರಲ್ಲಿ ಯೋಜನಾ ಆಯೋಗದ ಮಾಜಿ ಸದಸ್ಯ ಸಯ್ಯದ್ ಹಮೀದ್, ನ್ಯಾಯವಾದಿ ಪ್ರಶಾಂತ್ ಭೂಷಣ್, ಜೆಎನ್‌ಯುಎಸ್‌ಯುನ ಮಾಜಿ ಅಧ್ಯಕ್ಷ ಹಾಗೂ ಸಿಪಿಐ ನಾಯಕ ಕನ್ಹಯ್ಯಾ ಕುಮಾರ್, ಸಿಪಿಐಎಂಎಲ್‌ನ ಕವಿತಾ ಕೃಷ್ಣನ್, ಡಿಯುಟಿಎಯ ಮಾಜಿ ಅಧ್ಯಕ್ಷ ನಂದಿತಾ ನರೈನ್ ಹಾಗೂ ಹಿರಿಯ ಪತ್ರಕರ್ತೆ ಪಮೇಲಾ ಫಿಲಿಪೋಸ್ ಸೇರಿದ್ದಾರೆ. ಅಸಂವಿಧಾನಿಕ ಹಾಗೂ ಅನೈತಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡುವ ಧೈರ್ಯ ತೋರುವ ಎಲ್ಲರನ್ನೂ ಬಂಧಿಸುವ, ಗುರಿ ಮಾಡುವ ಹಾಗೂ ಬ್ರಾಂಡ್ ಮಾಡುವ ದುಷ್ಟ ಯೋಜನೆಯನ್ನು ದಿಲ್ಲಿ ಪೊಲೀಸರು ಮತ್ತೆ ಆರಂಭಿಸಿದ್ದಾರೆ ಎಂದು ಈ ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News