ಡ್ರಗ್ಸ್ ವಿರುದ್ಧ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಜನಜಾಗೃತಿ

Update: 2020-09-17 09:55 GMT

ಮಂಗಳೂರು, ಸೆ.17: ಮಾದಕ ವ್ಯಸನದಿಂದ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಜನಜಾಗೃತಿ ನಡೆಸಲು ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಅಭಿಯಾನ ರೂಪಿಸಲಾಗುವುದು ಎಂದು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರವಿಚಂದ್ರ ಪಿ.ಎಂ. ಹಾಗೂ ರಮೇಶ್ ಕೆ. ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಮಂಗಳೂರು ವಿ.ವಿ. ಸಿಂಡಿಕೇಟ್ ಸಭೆಯಲ್ಲೂ ಈ ಬಗ್ಗೆ ವಿಶೇಷ ಚರ್ಚೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.

ಪ್ರತಿ ಕಾಲೇಜಿನಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಹಾಗೂ ಅದರ ನಿಯಂತ್ರಣಕ್ಕಾಗಿ ಸಮಿತಿ ರಚನೆ ಮಾಡಿದ್ದು, ಇದನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು. ಅಲ್ಲದೆ ಕಾಲೇಜಿನ ವಿದ್ಯಾರ್ಥಿ ಸಂಘ, ಎನ್‌ಸಿಸಿ/ಎನ್ನೆಸ್ಸೆಸ್ ಮುಂತಾದ ಘಟಕಗಳು ಈ ಬಗ್ಗೆ ವಿಶೇಷ ಪ್ರಯತ್ನ ಮಾಡುವಂತೆ ತರಬೇತಿ ನೀಡಲಾಗುವುದು ಎಂದರು.

ಇದರ ಭಾಗವಾಗಿ ಕಾಲೇಜಿನಲ್ಲಿ ವಾರ್ಷಿಕ ಆರಂಭದಲ್ಲಿ ವಿದ್ಯಾರ್ಥಿ ಜಾಗೃತಿ ಸಭೆ, ಟಾಸ್ಕ್‌ಫೋರ್ಸ್ ರಚನೆ, ಎನ್‌ಜಿಒಗಳ ಜೊತೆ ಸೇರಿ ಜನಜಾಗೃತಿ ಅಭಿಯಾನ, ಡ್ರಗ್ಸ್ ವಿರುದ್ಧ ಕಠಿಣ ಕಾನೂನು ರೂಪಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗುವುದು.  ಜನನಾಯಕರು, ಸಾಹಿತಿಗಳು, ಮಠಾಧೀಶರು, ಸಂಘ ಸಂಸ್ಥೆಗಳ ನಾಯಕರು ಪಕ್ಷಭೇದ ಮರೆತು ಜನಾಭಿಪ್ರಾಯ ಮೂಡಿಸುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News