ಪ್ರಧಾನಿ ಮೋದಿ ಜನ್ಮ ದಿನಾಚರಣೆ: ಎನ್‌ಎಸ್‌ಯುಐನಿಂದ ಪಕೋಡ ತಯಾರಿ ಬಗ್ಗೆ ಅಣಕು ಪ್ರದರ್ಶನ

Update: 2020-09-17 13:33 GMT

ಮಂಗಳೂರು, ಸೆ.17: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವನ್ನು ಎನ್‌ಎಸ್‌ಯುಐನ ದ.ಕ. ಜಿಲ್ಲಾ ಘಟಕದ ವತಿಯಿಂದ ನಿರುದ್ಯೋಗ ದಿನವಾಗಿ ಪ್ರತಿಭಟನಾ ರೀತಿಯಲ್ಲಿ ಆಚರಿಸಲಾಯಿತು.

ಎನ್‌ಎಸ್‌ಯುಐನ ವಿದ್ಯಾರ್ಥಿಗಳು ನಿರುದ್ಯೋಗ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ಖಂಡಿಸಿ ಪಕೋಡ ತಯಾರಿ ಬಗ್ಗೆ ಅಣಕು ಪ್ರದರ್ಶನ ನೀಡಿದರು.

ಎನ್‌ಎಸ್‌ಯುಐನ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ,  ವರ್ಷಕ್ಕೆ 12 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಂದು ದೇಶದಲ್ಲಿ ಎರಡೂವರೆ ಕೋಟಿಷ್ಟು ಉದ್ಯೋಗ ನಷ್ಟವಾಗುವಂತಹ ಸನ್ನಿವೇಶಕ್ಕೆ ತಂದಿರಿಸಿದೆ. ಅವೈಜ್ಞಾನಿಕವಾಗಿ ಲಾಕ್‌ಡೌನ್‌ನ್ನು ಜಾರಿಗೊಳಿಸಿ, ಬಡವರನ್ನು, ವಿದ್ಯಾರ್ಥಿಗಳನ್ನು ಬೀದಿಗಿಳಿಯುವಂತೆ ಮಾಡಿದೆ. ಇಂಜಿನಿಯರ್ ವಿದ್ಯಾರ್ಥಿಗಳು, ವಿದೇಶದಿಂದ ಬಂದವರು, ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ 250 ರೂ. ವೇತನ ಪಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದ.ಕ. ಜಿಲ್ಲೆಯಲ್ಲಿ ಹಲವಾರು ವಿದ್ಯಾ ಸಂಸ್ಥೆಗಳಿದ್ದು, ಇಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳು ವಿದೇಶದಲ್ಲಿ, ಇತರ ರಾಜ್ಯಗಳಲ್ಲಿ ಕೂಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ ಮಾತನಾಡಿ, ಕೇಂದ್ರ ಸರಕಾರ ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ವಂಚಿಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಮಂಗಳೂರು ನಗರ ಅಧ್ಯಕ್ಷ ಶೌನಕ್ ರೈ, ಆರ್‌ಟಿಐ ರಾಷ್ಟ್ರೀಯ ಸಂಯೋಜಕ ಅನ್ವೀತ್ ಕಟೀಲ್, ಬಂಟ್ವಾಳ ವಿಧಾನಸಭಾ ಅಧ್ಯಕ್ಷ ವಿನಯ್ ಕುಮಾರ್, ಕಾರ್ಯದರ್ಶಿ ಬಾತಿಶ್ ಅಳಕೆಮಜಲು, ನಜೀಬ್, ಸೌಹಾನ್ ಎಸ್.ಕೆ., ಶುಭಂ, ಶಫೀಕ್, ಮೋಕ್ಷಿತ್, ಹಸನ್ ಮತ್ತಿತರರು ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News