ಪುತ್ತಿಗೆ ಮಠದ ಸಂಸ್ಥೆಗೆ ವಿಕ್ಟೋರಿಯಾ ಸರಕಾರದ ಅನುದಾನ

Update: 2020-09-17 14:24 GMT

ಉಡುಪಿ, ಸೆ.17: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಸರಕಾರ, ಆಸ್ಟ್ರೇಲಿಯಾದಲ್ಲಿರುವ ಉಡುಪಿ ಪುತ್ತಿಗೆ ಮಠದ ಕೃಷ್ಣ ಬೃಂದಾವನ ಸಂಸ್ಥೆಗೆ 4.4 ಲಕ್ಷ ಡಾಲರ್ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದು ಮಠದ ಮೂಲಗಳು ತಿಳಿಸಿದೆ.

ಪುತ್ತಿಗೆ ಮಠವು ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ವಿಕ್ಟೋರಿಯಾ ರಾಜ್ಯ ಸರಕಾರ ಈ ಅನುದಾನ ಬಿಡುಗಡೆ ಮಾಡಿದೆ ಎಂದು ಅದು ತಿಳಿಸಿದೆ. ಭಾರತೀಯ ಕರೆನ್ಸಿಯಲ್ಲಿ ಈ ಅನುದಾನದ ಮೊತ್ತ ಎರಡು ಕೋಟಿ ರೂಪಾಯಿ ಆಗಿದೆ.

ಆಸ್ಟ್ರೇಲಿಯದಲ್ಲಿ ಕೊರೋನ ಹಾವಳಿಯ ಸಂದರ್ಭದಲ್ಲಿ ಪುತ್ತಿಗೆ ಮಠದ ಕೃಷ್ಣ ಬೃಂದಾವರ ಸಂಸ್ಥೆ ಸಮುದಾಯಕ್ಕೆ ಆಹಾರ ವಸ್ತುಗಳನ್ನು ಪೂರೈಸಿತ್ತು. ಮಠವು ಕೈಗೊಂಡ ಸೇವಾಕಾರ್ಯಗಳನ್ನು ಪರಿಗಣಿಸಿ ಈ ಅನುದಾನ ನೀಡಲಾಗಿದೆ. ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು ಬಂದಾಗಲೂ ಮಠ ಸ್ಪಂದಿಸಿತ್ತು. ಇದನ್ನು ಗಮನಿಸಿದ ವಿಕ್ಟೋರಿಯಾ ಸರಕಾರ, ಸಂಸ್ಥೆಯ ಕಟ್ಟಡ ಮೊದಲಾದ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿ ಸಲು ಅನುದಾನವನ್ನು ನೀಡಿದೆ.

ಒಂದು ಸಣ್ಣ ಸಮುದಾಯ ಸಲ್ಲಿಸಿದ ಸೇವೆಯನ್ನು ಗಮನಿಸಿ ಇಷ್ಟು ದೊಡ್ಡ ಮೊತ್ತವನ್ನು ಸರಕಾರ ನೀಡಿರುವುದು ಇದೇ ಮೊದಲು. ಗೂಗಲ್ ಮೀಟ್‌ನಲ್ಲಿ ಸರಕಾರದ ಪ್ರತಿನಿಧಿಗಳು ಈ ವಿಚಾರವನ್ನು ಪ್ರಕಟಿಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News