ಉಡುಪಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ; 8 ತಿಂಗಳಲ್ಲಿ 5826 ಪ್ರಕರಣಗಳು ದಾಖಲು: ಎಸ್ಸೈ ಅಬ್ದುಲ್ ಖಾದರ್

Update: 2020-09-17 15:35 GMT

ಉಡುಪಿ, ಸೆ.17: ಉಡುಪಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.1ರಿಂದ ಸೆ.17ರವರೆಗೆ ಸಂಚಾರ ನಿಯಮ ಉಲ್ಲಂಘಿಸಿರುವ ಬಗ್ಗೆ ಒಟ್ಟು 5826 ಪ್ರಕರಣಗಳು ದಾಖಲಾಗಿದ್ದು, 28,28,200ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಗುರುವಾರ ನಡೆದ ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಸಹಕರಿಸಬೇಕು. ಎಲ್ಲ ದಾಖಲೆ ಗಳನ್ನು ವಾಹನದಲ್ಲಿ ಸಮರ್ಪಕವಾಗಿ ಇಟ್ಟುಕೊಂಡರೆ ಪೊಲೀಸರು ದಂಡ ವಿಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಪಾರ್ಕಿಂಗ್ ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದರೆ ಆ ವಾಹನದ ಮಾಲಕರು ಹಾಗೂ ಅಂಗಡಿ ಮಾಲಕರು ಜವಾಬ್ದಾರರಾಗುತ್ತಾರೆ. ಕರ್ಕಶ ಹಾರ್ನ್, ವಾಹನಗಳ ಆಲ್ಟ್ರೇಷನ್, ಬಸ್, ಆಟೋ ಚಾಲಕರು ಸಮವಸ್ತ್ರ ಧರಿಸದಿರುವುದು, ಚಾಲನೆ ವೇಳೆ ಮೊಬೈಲ್ ಬಳಕೆ, ಟಿಂಟ್ ಗ್ಲಾಸ್ ‌ಗಳ ಅಳವಡಿಕೆ ಮಾಡಿರುವುದು ಕಂಡುಬಂದರೆ ನಿಯಮಾವಳಿಯಂತೆ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.

ವಾಹನಗಳನ್ನು ಮಾರಾಟ ಮಾಡುವಾಗ ಮತ್ತು ಖರೀದಿಸುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ. ಆರ್‌ಸಿ, ಇನ್ಶೂರೆನ್ಸ್, ಅಪಘಾತ ಗಳ ವಿವರ ಸಹಿತ ವಾಹನದ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು. ವಾಹನ ಮಾರಾಟ ಮಾಡುವವರೇ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ವಾಹನ ಹಸ್ತಾಂತರಿಸಬೇಕು. ಪೊಲೀಸರು ತಪಾಸಣೆ ವೇಳೆ ದಾಖಲೆಗಳು ಸಮರ್ಪಕ ವಾಗಿರದಿದ್ದರೆ ಅಂತಹ ವಾಹನ ಗಳನ್ನು ಮುಟ್ಟುಗೋಲು ಹಾಕಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಉಡುಪಿ ನಗರಠಾಣೆಯ ಪೊಲೀಸ್ ನಿರೀಕ್ಷಕ ಶಕ್ತಿವೇಲು, ಉಡುಪಿ ಟ್ಯಾಕ್ಸಿಮೆನ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ನಗರದಲ್ಲಿ ಸಂಚಾರ ದಟ್ಟಣೆಗೆ ಪಾರ್ಕಿಂಗ್ ಸಮಸ್ಯೆಯೇ ಮುಖ್ಯ ಕಾರಣ ಆಗಿದೆ. ರಾಷ್ಟ್ರೀಯ ಹೆದ್ದಾರಿ ಸಹಿತ ಸಂಚಾರ ದಟ್ಟಣೆ ಇರುವ ಆಯ ಕಟ್ಟಿನ ಭಾಗಗಳಲ್ಲಿ ಪೊಲೀಸರು ಮಾರ್ಕಿಂಗ್ ಮಾಡಲಾಗಿರುವ ಜಾಗ ಬಿಟ್ಟು ಹೊರ ಭಾಗದಲ್ಲಿ ವಾಹನ ನಿಲ್ಲಿಸಿದರೆ ಅಂತಹ ವಾಹನ ಗಳನ್ನು ಪೊಲೀಸರು ಲಾಕ್ ಮಾಡಲಿದ್ದಾರೆ. ದಂಡ ಪಾವತಿಸಿದ ಬಳಿಕವೇ ವಾಹನ ಬಿಡುಗಡೆ ಮಾಡ ಲಾಗುತ್ತದೆ ಎಂದು ಎಸ್ಸೈ ಅಬ್ದುಲ್ ಖಾದರ್ ಎಚ್ಚರಿಕೆ ನೀಡಿದರು.

ಸಂಚಾರ ನಿಯಮ ಉಲ್ಲಂಘಿಸಿದಾಗ ಯಾವುದೇ ಹಸ್ತಕ್ಷೇಪ ಮಾಡದೆ ಪೊಲೀಸರೊಂದಿಗೆ ಸಹಕರಿಸಬೇಕು. ದುರ್ವತನೆ ತೋರಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಇಂದು ಸುಶಿಕ್ಷಿತರು ಕೂಡ ನಿಯಮ ಉಲ್ಲಂಘಿಸಿ ಪ್ರಭಾವ ಬಳಸಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News