ದುಬಾರಿ ದರ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಆರೋಪ: ಡಿವೈಎಫ್‌ಐನಿಂದ ಅಣಕು ಹೆಣವಿಟ್ಟು ಪ್ರತಿಭಟನೆ

Update: 2020-09-17 15:59 GMT

ಮಂಗಳೂರು, ಸೆ.17: ಕೊರೋನ ಸೋಂಕಿತರಿಗೆ ಸರಕಾರ ನಿಗದಿಪಡಿಸಿದ ದರಕ್ಕಿಂತಲೂ ದುಬಾರಿ ಶುಲ್ಕ ವಿಧಿಸುತ್ತಾ, ನಿಯಮ ಉಲ್ಲಂಘಿಸುತ್ತಿವೆ ಎಂದು ಆರೋಪಿಸಿ, ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ವಿರೋಧಿಸಿ ಡಿವೈಎಫ್‌ಐನಿಂದ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂಭಾಗ ಅಣಕು ಹೆಣಗಳನ್ನಿಟ್ಟು ವಿನೂತನ ರೀತಿಯಲ್ಲಿ ಪ್ರತಿಭಟಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ದ.ಕ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳು, ವೈದ್ಯರು ಕೊರೋನ ಸೋಂಕಿತರಿಗೆ ದುಬಾರಿ ದರ ವಿಧಿಸುತ್ತಿವೆ. ಸರಕಾರದ ಆದೇಶದ ಹೊರತಾಗಿಯೂ ಖಾಸ್ಪತ್ರೆಗಳು ರೋಗಿಗಳ ಕಡೆಯ ವರಿಂದ ಹಣ ವಸೂಲಿ ಮಾಡುತ್ತಿವೆ. ಬಿಲ್ ಮೊತ್ತ ಪಾವತಿಸಲು ಸಾಧ್ಯವಾಗದ ರೋಗಿಗಳನ್ನು ಅಕ್ರಮವಾಗಿ ಬಂಧನದಲ್ಲಿಡುವುದು, ಶವ ಬಿಟ್ಟು ಕೊಡದಿರುವುದು ಸೇರಿದಂತೆ ನಿರಂತರ ನಿಯಮ ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದರು.

ಸರಕಾರದ ನಿಯಮ ಉಲ್ಲಂಘಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಎಲ್ಲ ಕೊರೋನ ಸೋಂಕಿತರಿಗೆ ಸಮಾನ ಉತ್ತಮ ಗುಣಮಟ್ಟದ ಉಚಿತ ಚಿಕಿತ್ಸೆ ಒದಗಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲೆಯ ಸರಕಾರಿ ಆರೋಗ್ಯ ಸೇವೆ ಸಂಪೂರ್ಣವಾಗಿ ಹದಗೆಟ್ಟಿದೆ. ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆಸ್ಪತ್ರೆಗಳು ಸರಾಸರಿಗಿಂತ ತೀರಾ ಕೆಳಮಟ್ಟದಲ್ಲಿವೆ. ಜಿಲ್ಲಾ, ತಾಲೂಕು ಆಸ್ಪತ್ರೆಗಳಿಗೆ ಜನ ಚಿಕಿತ್ಸೆಗೆ ತೆರಳಲು ಭಯಪಡುವಂತಾಗಿದೆ. ಐದಾರು ಜಿಲ್ಲೆಗಳ ಜನಸಾಮಾನ್ಯರ ಪಾಲಿಗೆ ಏಕೈಕ ವೆನ್ಲಾಕ್‌ನ ತುರ್ತು ಚಿಕಿತ್ಸಾ ಘಟಕಗಳಲ್ಲಿ ಸಹಿತ ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲದೇ ಬಡರೋಗಿಗಳ ಪಾಲಿಗೆ ನರಕಯಾತನೆಯಾಗಿದೆ ಎಂದರು.

ಆಸ್ಪತ್ರೆಗಳಲ್ಲಿ ಕೊರೋನ ಚಿಕಿತ್ಸೆ ಹೊರತುಪಡಿಸಿ ಬೇರೆ ಚಿಕಿತ್ಸೆಯು ಸಿಗದ ಕಾರಣ ಜನ ಉಚಿತ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಔಷಧಿ, ನುರಿತ ಸಿಬ್ಬಂದಿ ಸಹಿತ ಬಹಳಷ್ಟು ಕೊರತೆಗಳಿದ್ದು, ಇಂತಹ ಕೊರತೆಗಳನ್ನು ಭರ್ತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಡಿಎಚ್‌ಒಗೆ ಒತ್ತಾಯಿಸಿದರು.

ಜಿಲ್ಲೆಯ ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಗಳಲ್ಲಿ ಬಳಸಿ ಸರಕಾರ ಮೆಡಿಕಲ್ ಕಾಲೇಜು ತೆರೆಯುವ ಮೂಲಕ ಜಿಲ್ಲೆಯ ಸಾರ್ವಜನಿಕ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ಬಲ ತುಂಬಬೇಕು ಎಂದು ಆಗ್ರಹಿಸಿದರು.

ಸರಕಾರಿ ಆಸ್ಪತ್ರೆ ಬಲಪಡಿಸುವ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ಕೊರೋನ ಸೋಂಕಿತರಿಗೆ ಉತ್ತಮ ಗುಣಮಟ್ಟದ ಉಚಿತ ಚಿಕಿತ್ಸೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಚಿಕಿತ್ಸೆ ದರದಲ್ಲಿ ಸರಕಾರದ ಮಾನದಂಡ ಪಾಲನೆಯಾಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ಆಶಾ ಬೋಳೂರು, ಮನೋಜ್ ವಾಮಂಜೂರು, ರಫೀಕ್ ಹರೇಕಳ, ಅಶ್ರಫ್ ಕೆ.ಸಿ.ರೋಡ್, ಸುನಿಲ್ ತೇವುಲ, ನವೀನ್ ಕೊಂಚಾಡಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News