ಮಂಗಳೂರು ಆದಾಯ ತೆರಿಗೆ ಆಯುಕ್ತರ ಕಚೇರಿ ಸ್ಥಳಾಂತರವಿಲ್ಲ : ಕೇಂದ್ರ ಸಚಿವ ಸದಾನಂದ ಗೌಡ

Update: 2020-09-17 16:28 GMT

ಮಂಗಳೂರು, ಸೆ.17: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಆಯುಕ್ತರ ಕಚೇರಿಯನ್ನು ನಗರದಿಂದ ಯಾವುದೇ ಕಾರಣಕ್ಕೂ ಬೇರೆಡೆ ಸ್ಥಳಾಂತರಿಸುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ಟ್ವೀಟರ್ ಮೂಲಕ ಹೇಳಿಕೆ ನೀಡಿರುವ ಸಚಿವರು, ಆದಾಯ ತೆರಿಗೆ ಆಯುಕ್ತರ ಕಚೇರಿ ಸ್ಥಳಾಂತರ ಪ್ರಸ್ತಾಪ ತನ್ನ ಗಮನಕ್ಕೆ ಬಂದ ತಕ್ಷಣವೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದೇನೆ. ಕಚೇರಿಯನ್ನು ಮಂಗಳೂರಿನಲ್ಲಿಯೇ ಮುಂದುವರಿಸುವ ಅವಶ್ಯ ಕತೆ ಬಗ್ಗೆಯೂ ವಿವರಣೆ ನೀಡಲಾಗಿದೆ. ಈ ಬೇಡಿಕೆಗೆ ಹಣಕಾಸು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಚೇರಿಯು ಬೇರೆಡೆ ಸ್ಥಳಾಂತರ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಚೇರಿ ಮಂಗಳೂರಿರಲ್ಲೇ ಮುಂದುವರಿಕೆ: ನಳಿನ್ 

ಕೇಂದ್ರೀಯ ನೇರ ತೆರಿಗೆ ಮಂಡಳಿಯ ನಿರ್ಧಾರದಂತೆ ಕಳೆದ ಎರಡು ದಶಕಗಳಿಗಿಂತ ಹೆಚ್ಚು ಕಾಲ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ (ಆಡಳಿತ) ಕಚೇಯು ಮಂಗಳೂರಿನಲ್ಲೇ ಮುಂದುವರಿಕೆಯಾಗಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

ಕಚೇರಿಯನ್ನು ಗೋವಾದ ಪಣಜಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯಲ್ಲಿ ವಿಲೀನಗೊಳಿಸುವ ನಿರ್ಧಾರವನ್ನು ಕೈಬಿಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸಿದ್ದೆ. ಕಚೇರಿಯನ್ನು ಮಂಗಳೂರಿನಲ್ಲಿಯೇ ಮುಂದುವ ರಿಸಲು ಕೇಂದ್ರ ಸಚಿವೆ ಒಪ್ಪಿಗೆ ನೀಡಿದ್ದಾರೆ ಎಂದು ಪ್ರಕಟನೆಯಲ್ಲಿ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಂಗಳೂರಲ್ಲಿ ಕಚೇರಿ ಮುಂದುವರಿಕೆ ಸ್ವಾಗತಾರ್ಹ: ಐಸಿಎಐ

ಆದಾಯ ತೆರಿಗೆ ಪ್ರಧಾನ ಆಯುಕ್ತ (ಪಿಸಿಐಟಿ) ಕಚೇರಿಯನ್ನು ಮಂಗಳೂರಿನಲ್ಲಿ ಉಳಿಸಿಕೊಳ್ಳುವ ಮತ್ತು ವರ್ಗಾವಣೆ ಮಾಡಲು ಹೊರಡಿಸಿದ ಆದೇಶ ರದ್ದುಗೊಳಿಸುವ ಕುರಿತು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತುಕತೆ ನಡೆಸಿದ್ದಾರೆ. ಮಂಗಳೂರಲ್ಲಿ ಕಚೇರಿ ಮುಂದು ವರಿಕೆಯು ಸ್ವಾಗತಾರ್ಹ ಎಂದು ಐಸಿಎಐ (ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ) ತಿಳಿಸಿದೆ.

ಮಂಗಳೂರಿನಿಂದ ಗೋವಾದ ಪಣಜಿಗೆ ಕಚೇರಿ ವರ್ಗಾವಣೆ ಆಗದಂತೆ ಐಸಿಎಐನ ಮಂಗಳೂರು ಶಾಖೆ, ಐಸಿಎಐನ ಉಡುಪಿ ಶಾಖೆ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಮತ್ತು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಹಾಗೂ ವಿವಿಧ ವೇದಿಕೆಗಳು ನೀಡಿದ ಪ್ರಾತಿನಿಧ್ಯಕ್ಕೆ ಹಣಕಾಸು ಸಚಿವರು ಸಮ್ಮತಿಸಿದ್ದಾರೆ. ಇದು ಕರಾವಳಿ ಪ್ರದೇಶಕ್ಕೆ ನಿಜಕ್ಕೂ ಅವಿಸ್ಮರಣೀಯ ವಿಚಾರವಾಗಿದೆ ಎಂದು ಐಸಿಎಐ ಅಧ್ಯಕ್ಷ ಎಸ್.ಎಸ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News