'ವಿಟ್ಲ ಪ.ಪಂ. ಪೌರ ಕಾರ್ಮಿಕರ ಕೆಲಸಗಳನ್ನು ನೋಡಿಕೊಳ್ಳುವ ಅಧಿಕಾರಿಗಳು ಇಲ್ಲ'

Update: 2020-09-17 16:55 GMT

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಒಕ್ಕೆತ್ತೂರು ಮತ್ತು ಸುರುಂಬಡ್ಕ ಆಸುಪಾಸಿನ ಪ್ರದೇಶಗಳಿಗೆ ತ್ಯಾಜ್ಯ ಸಂಗ್ರಹಿಸುವ ವಾಹನವು ಮೊದಲು ವಾರಕ್ಕೊಂದು ದಿನ ಬರುತ್ತಿದ್ದವರು ಕಳೆದ ಲಾಕ್ಡೌನ್ ದಿನಗಳಿಂದ ಎರಡು ವಾರಕ್ಕೊಮ್ಮೆ ನಂತರ ತಿಂಗಳಿಗೊಮ್ಮೆಯಾಗಿದ್ದು, ಇದೀಗ ಬರುವುದನ್ನೇ ಸ್ಥಗಿತಗೊಳಿಸಿದರೂ ಇದನ್ನು ಯಾರೂ, ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಒಕ್ಕೆತ್ತೂರು, ಸುರುಂಬಡ್ಕ ನೊಂದವರ ಪರವಾಗಿ ಅಬ್ದುಲ್ ಖಾದರ್ ಕುಕ್ಕಾಜೆ ಎಂಬವರು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಮಣ್ಣಿನ ರಸ್ತೆ ಹದಗೆಟ್ಟ ಕಾರಣದಿಂದಾಗಿ ಬರಲಿಲ್ಲ ಎಂದು ಸಬೂಬು ಹೇಳಿ ಅಷ್ಟೊಂದು ಮನೆಗಳ ಬಳಿ ಬರುವುದನ್ನೇ  ತಪ್ಪಿಸಿಕೊಂಡಿದ್ದವರು ಈಗಾಗಲೇ ರಸ್ತೆ ದುರಸ್ತಿಯ ಕೆಲಸ ಮುಗಿದಿದ್ದರೂ ಮತ್ತೆ ಬಾರದ ಇವರಲ್ಲಿ ವಿಚಾರಿಸಿದರೆ,  ಉಡಾಫೆಯ ಉತ್ತರ ನೀಡುತ್ತಾರೆ. ಇವರ ಕಸ ವಿಲೇವಾರಿ ಮಾಡುವ ವಾಹನ ಬರದೆ ಇದ್ದ ಸಂಧರ್ಭದಲ್ಲಿಯೂ ಅದೇ ರಸ್ತೆಯಲ್ಲಿ ಅಲ್ಲಿನ ಜನಗಳ ಭೇಟಿಗೆ ಬರುವ ದುಬಾರಿ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳು ಅದೇ ರಸ್ತೆಯಲ್ಲಿ ಸದಾ ಸಂಚರಿಸುತ್ತಿದ್ದವು. ಇನ್ನು ಒಳ ಮಣ್ಣಿನ ರಸ್ತೆ ಬದಿಯಲ್ಲಿರುವ  ಪ್ರದೇಶಗಳಲ್ಲಿ ವಾಸಿಸುವ ಮನೆಯಲ್ಲಿನ ಮಹಿಳೆಯರು ತಮ್ಮ ತಮ್ಮ ಕಸಗಳನ್ನು ಅಲ್ಲಿನ ಮುಖ್ಯ  ಡಾಮರು ರಸ್ತೆ ಬದಿಯಲ್ಲಿ ನಡೆದು ಬಂದು ತಂದಿಟ್ಟರೂ ಅದನ್ನು ನಿರ್ಲಕ್ಷಿಸಿ ಬಿಟ್ಟು ಹೋಗುವ ಇವರಿಂದಾಗಿ, ಗೃಹಿಣಿಯರು ಆಲ್ಲಿಟ್ಟು ಹೋದ ಕಸವು ಬೀದಿ ನಾಯಿಗಳ ಪಾಲಾಗಿ ಸಂಪೂರ್ಣ ಪರಿಸರವೇ ದುರ್ನಾತ ಹಬ್ಬುತ್ತಿದೆ. ಮಾತ್ರವಲ್ಲ ಇದರಿಂದಾಗಿ ಡಾಮರು ರಸ್ತೆ ಬದಿಯಲ್ಲಿನ ಮನೆಮಂದಿಗಳಿಗೆ ಇದರ  ದುರ್ನಾತ ಕಿರಿ ಕಿರಿಯಾಗಿ ನೆರೆಹೊರೆಯ ಮಹಿಳೆಯರ ಸೌಹಾರ್ದತೆಗೂ ಬಿರುಕು ಆಗುವ ಹಾಗೆ ಕಾಣಿಸುತ್ತಿದೆ. ಹಾಗಿದ್ದರೂ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತಿರುವ ವಿಷಯಗಳನ್ನು ಹೇಳಿದರೂ ನೀವು ದೂರು ನೀಡಿ, ಪತ್ರಿಕೆಯಯಲ್ಲಿ ನೀಡಿ ಏನು ಬೇಕಾದರೂ ಮಾಡಿ ಎಂದು ಹೇಳುವ ಇವರ ವೈಖರಿಯನ್ನು ಯಾರು ಕೂಡ ಪ್ರಶ್ನಿಸಲಾಗದ ಮಟ್ಟಕ್ಕೆ ಇವರು ಬೆಳೆದು ಬಂದ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ಏನಾದರೂ ಪಿತೂರಿ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಿ ಇಲ್ಲಿಯ ನಾಗರಿಕರಿಗೆ ನ್ಯಾಯ ಒದಗಿಸಿ ಕೊಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಇವರು ಕಸವನ್ನು ಸಂಗ್ರಹಿಸುವ ಬಗ್ಗೆ ಪಟ್ಟಣ ಪಂಚಾಯತ್  ಇಲ್ಲಿನ ನಿವಾಸಿಗಳಿಂದ ತ್ಯಾಜ್ಯ ವಸ್ತು ನಿರ್ವಹಣೆ ಎಂಬುವುದಾಗಿ ಮನೆ ತೆರಿಗೆಯ ಜತೆ ಪ್ರತ್ಯೇಕ ಕರ ವಿಧಿಸುತ್ತದೆ. ಅದಾಗ್ಯೂ ಇವರ ಬರುವಿಕೆಯು ಕೂಡಾ ಯಾರಿಗೂ ಗೊತ್ತಾಗದ ರೀತಿಯಲ್ಲಿದೆ. ಅಂದರೆ, ಮೊದಲಾದರೆ ಪರಿಸರ ಸ್ವಚ್ಚತಾ ಜಾಗೃತಿಯನ್ನು ಹೇಳುವ ಮತ್ತು ನೈರ್ಮಲ್ಯದ ಬಗ್ಗೆ ಕೆಲವು ಹಾಡುಗಳನ್ನು ಜೋರಾಗಿ ಇಟ್ಟು ಬರುತ್ತಿದ್ದ ಇವರು ಈಗಾಗಲೇ ಮೌನಕ್ಕೆ ಜಾರಿದ್ದು, ಕಸದ ಕಟ್ಟುಗಳನ್ನು ಹಿಡಿದು ಇವರ  ಬರುವಿಕೆಯ ಸಮಯಕ್ಕಾಗಿ ಕಾದು ನಿಂತ ಹೆಂಗಸರು ಕಂಗಾಲಾಗಿದ್ದಾರೆ. ರಸ್ತೆ ಬದಿಯಲ್ಲಿ ಬಿಟ್ಟು ಹೋದರೆ ನಾಯಿಪಾಲು ಆಗುವುದರಿಂದ ಬಿಟ್ಟು ಹೋಗಲಾಗದೆ, ಮನೆಗೆಲಸಗಳನ್ನು ಮಕ್ಕಳ online class ಗಳನ್ನು ಬಿಟ್ಟು ರಸ್ತೆ ಬದಿಯಲ್ಲಿ ನಿಂತು, ನಿಂತು ಸುಸ್ತಾಗಿ ಬಿಡುತ್ತಾರೆ.

ಈ ಮೊದಲು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಮಹಿಳಾ ಅಧಿಕಾರಿಯೊಬ್ಬರು ಇತ್ಯಾದಿ ಲೋಪವನ್ನು ದೂರು ನೀಡಿದ ಕೂಡಲೇ ಸ್ಪಂದಿಸಿ ಪರಿಹರಿಸುತ್ತಿದ್ದರು. ಆದರೆ ಇಂದು ಪಟ್ಟಣ ಪಂಚಾಯತ್ ಕಚೇರಿಗೆ ಮಹಿಳೆಯರು ಪೋನಾಯಿಸಿ ಹೇಳಿದರೂ ಪುರುಷರು ಹೋಗಿ ದೂರು ನೀಡಿದರೂ, ಅಲ್ಲಿ ಹೇಳಿ ಇಲ್ಲಿ ಬೇಡ, ಅವರಲ್ಲಿ ಹೋಗಿ, ಇವರಲ್ಲಿ ನೋಡಿ ಎಂದು ಸತಾಯಿಸುವುದಕ್ಕಿಂತ ಹೆಚ್ಚಿನ ಫಲಿತಾಂಶ ಸಿಗುವುದಿಲ್ಲ ಎಂಬುವುದು ದೂರು ನೀಡಿದವರ ವ್ಯಾಕುಲತೆಯಾಗಿದೆ ಎಂದು ಒಕ್ಕೆತ್ತೂರು, ಸುರುಂಬಡ್ಕ ನೊಂದವರ ಪರವಾಗಿ ಅಬ್ದುಲ್ ಖಾದರ್ ಕುಕ್ಕಾಜೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News