ಚೀಯರ್‌ಲೀಡರ್‌ಗಳಿಲ್ಲ... ಅಭಿಮಾನಿಗಳಿಲ್ಲ.. ಕೋವಿಡ್ ಯುಗದಲ್ಲಿ ಐಪಿಎಲ್.. !

Update: 2020-09-17 18:21 GMT

ಹೊಸದಿಲ್ಲಿ, ಸೆ.17:ಯುಎಇಗೆ ಸ್ಥಳಾಂತರಿಸಲ್ಪಟ್ಟ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ತನ್ನ ವಾಡಿಕೆಯ ಹೊಳಪು ಮತ್ತು ಗ್ಲಾಮರ್ ಇಲ್ಲದೆ ಶನಿವಾರ ಪ್ರಾರಂಭವಾಗಲಿದೆ. ಆದರೆ ಟ್ವೆಂಟಿ -20 ಪಂದ್ಯಾವಳಿಯನ್ನು ಕೊರೋನ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಸ್ವಾಗತಿಸುತ್ತಾರೆಂದು ನಿರೀಕ್ಷಿಸಲಾಗಿದೆ.

 ಐಪಿಎಲ್ ಉತ್ಸವವು ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಪ್ರಾರಂಭವಾಗುತ್ತದೆ. ಆದರೆ ಜಗತ್ತಿನಾದ್ಯಂತ ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಿದ ಕಾರಣ ಪ್ರಮುಖ ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳನ್ನು ಮುಂದೂಡಲಾಗಿತ್ತು. ಭಾರತದಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದಂತೆ ಹದಿಮೂರನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಗಿದೆ.

   

ಯುಎಇಗೆ ಇಳಿದಾಗಿನಿಂದ ಎಲ್ಲಾ ಎಂಟು ತಂಡಗಳು ಕಟ್ಟುನಿಟ್ಟಾದ, ಜೈವಿಕ ಸುರಕ್ಷಿತ ಸ್ಥಳಗಳಲ್ಲಿದ್ದವು. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೆಪ್ಟಂಬರ್ 19 ರಂದು ಅಬುಧಾಬಿಯಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸುವುದರೊಂದಿಗೆ ಐಪಿಎಲ್ ಟೂರ್ನಿಗೆ ಚಾಲನೆ ದೊರೆಯಲಿದೆ. ವಿಶ್ವದ ಶ್ರೀಮಂತ ಟ್ವೆಂಟಿ-20 ಲೀಗ್‌ನಲ್ಲಿ ಈ ಬಾರಿ ಅದ್ದೂರಿಯ ಉದ್ಘಾಟನಾ ಸಮಾರಂಭ ಇಲ್ಲ. ದುಬೈ ಮತ್ತು ಶಾರ್ಜಾ ಸೇರಿದಂತೆ ಮೂರು ಸ್ಥಳಗಳಲ್ಲಿ ಮುಚ್ಚಿ ದ ಬಾಗಿಲುಗಳ ಹಿಂದೆ ಪಂದ್ಯಗಳು ನಡೆಯಲಿವೆ. ಎಲ್ಲದರಲ್ಲೂ ಧನಾತ್ಮಕತೆಯಿದೆ. 13ನೇ ಆವೃತ್ತಿಯಲ್ಲಿ ಟಿವಿ ಮೂಲಕ ವೀಕ್ಷಕರ ಸಂಖ್ಯೆ ಜಾಸ್ತಿಯಾಗಲಿದೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗುಲಿ ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 10ರಂದು ಕೊನೆಗೊಳ್ಳುವ 53 ದಿನಗಳ ಪಂದ್ಯಾವಳಿಗೆ ಭಾರತದ ಸಂಜೆಯ ಪ್ರೈಮ್‌ಟೈಮ್ ಟಿವಿ ಸ್ಲಾಟ್‌ಗಳಿಗೆ ನಿಗದಿಯಾಗಿದೆ. ಐಪಿಎಲ್ ಪ್ರಸಾರಕರು ಈ ಋತುವಿನಲ್ಲಿ ಐಪಿಎಲ್‌ನಲ್ಲಿ ಹೆಚ್ಚಿನ ರೇಟಿಂಗ್‌ನ್ನು ನಿರೀಕ್ಷಿಸುತ್ತಿದ್ದಾರೆ.

ಕ್ರೀಡಾ ಮುಂದೂಡಿಕೆ ಮತ್ತು ರದ್ದತಿಯಿಂದ ಒಂದು ವರ್ಷದ ನಂತರ ಪಂದ್ಯಾವಳಿ ಕ್ರಿಕೆಟ್ ಪ್ರಿಯರನ್ನು ಉತ್ತೇಜಿಸುತ್ತದೆ ಎಂದು ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕಟ್ಟುನಿಟ್ಟಾದ ಬಿಸಿಸಿಐ ಆರೋಗ್ಯ ಸುರಕ್ಷತಾ ಶಿಷ್ಟಾಚಾರದ ಅಡಿಯಲ್ಲಿ ಆಟಗಾರರನ್ನು ಹೊಟೇಲ್‌ಗಳಿಗೆ ಮತ್ತು ಅಲ್ಲಿಂದ ಕರೆದೊಯ್ಯಲಾಗುತ್ತದೆ. 20,000ಕ್ಕೂ ಅಧಿಕ ಕೊರೋನ ವೈರಸ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಚೆನ್ನೈ ತಂಡದ ಇಬ್ಬರು ಆಟಗಾರರಿಗೆ ಕೊರೋನ ವೈರಸ್ ಸೋಂಕು ಬಾಧಿಸಿದೆ. ಕೆಲವು ಪ್ರಮುಖ ಆಟಗಾರರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಟೂರ್ನಿಯಿಂದ ದೂರವಾಗಿದ್ದಾರೆ. ಐಪಿಎಲ್ ವಿಶ್ವದ ಅತ್ಯಂತ ಜನಪ್ರಿಯ ದೇಶೀಯ ಲೀಗ್ ಆಗಿದೆ. ಆದರೆ 2008ರಲ್ಲಿ ಪ್ರಾರಂಭವಾದಾಗಿನಿಂದ ಭ್ರಷ್ಟಾಚಾರ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳನ್ನು ಎದುರಿಸುತ್ತಿದೆ.

   2013ರಲ್ಲಿ ಬೆಳಕಿಗೆ ಬಂದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಎರಡು ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ಋತುಗಳಿಗೆ ಅಮಾನತುಗೊಳಿಸಲಾಗಿತ್ತು . ವಿವಾದಗಳ ಹೊರತಾಗಿಯೂ ಐಪಿಎಲ್ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಸೇರಿದಂತೆ ವಿದೇಶಿ ತಾರೆಗಳನ್ನು ಆಕರ್ಷಿಸಿದೆ. ಕಮಿನ್ಸ್‌ರನ್ನು ಕೋಲ್ಕತಾ ನೈಟ್ ರೈಡರ್ಸ್ ಕಳೆದ ಹರಾಜಿನಲ್ಲಿ 2.17 ಮಿಲಿಯನ್‌ಗೆ ಖರೀದಿಸಿದೆ.

ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಆಟಗಾರರು ಗಮನ ಸೆಳೆಯಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾದ ಕೊಹ್ಲಿ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಲುಮತ್ತೊಮ್ಮೆ ತಂಡದೊಂದಿಗೆ ಪ್ರಯತ್ನಿಸಲಿದ್ದಾರೆ.

ಧೋನಿ ಕಳೆದ ತಿಂಗಳು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಐಪಿಎಲ್ ಪಂದ್ಯಾವಳಿಯಲ್ಲಿ ಗಮನ ಸೆಳೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News