ನೀಟ್ ಬಗ್ಗೆ ಹೇಳಿಕೆ: ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವಿಲ್ಲ ಎಂದ ಹೈಕೋರ್ಟ್

Update: 2020-09-18 11:54 GMT

ಚೆನ್ನೈ: ನ್ಯಾಯಾಂಗದ ವಿರುದ್ಧ ನಟ ಸೂರ್ಯ ಅವರು ನೀಡಿದ ಹೇಳಿಕೆಗಳಿಗೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟಿನ ಮುಖ್ಯ ಪೀಠ ಹೇಳಿದೆ. ನೀಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇಳೆ ನಟ ಇತ್ತೀಚೆಗೆ ನ್ಯಾಯಾಂಗವನ್ನು ಟೀಕಿಸಿದ್ದರು.

ನಟನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ನ್ಯಾಯಮೂರ್ತಿ ಎಸ್ ಎಂ ಸುಬ್ರಮಣಿಯಂ ಅವರು ಪತ್ರದ ಮೂಲಕ ಮಾಡಿದ ಅಪೀಲನ್ನು ಮುಖ್ಯ ನ್ಯಾಯಮೂರ್ತಿ ಎ ಪಿ ಸಾಹಿ ಅವರ ಪೀಠ ತಿರಸ್ಕರಿಸಿದೆ. ನಟ ತಮ್ಮ ಹೇಳಿಕೆಯಲ್ಲಿ  ನ್ಯಾಯಾಧೀಶರು ಹಾಗೂ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿ ನೀಡಿದ್ದ ಹೇಳಿಕೆ ಟಿವಿ ಹಾಗೂ ಯುಟ್ಯೂಬಿನಲ್ಲಿ ಕಾಣಿಸಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ನ್ಯಾಯಮೂರ್ತಿ ಎಸ್ ಎಂ ಸುಬ್ರಮಣಿಯಂ ಅವರ ಆಗ್ರಹವಾಗಿತ್ತು.

“ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸುತ್ತಿದ್ದರೆ ವಿದ್ಯಾರ್ಥಿಗಳಿಗೆ ಧೈರ್ಯದಿಂದ ಪರೀಕ್ಷೆಗೆ ಹಾಜರಾಗುವಂತೆ ಹೇಳುತ್ತಿದ್ದಾರೆ'' ಎಂದು ಸೂರ್ಯ ಹೇಳಿದ್ದರು.

ಯಾವುದೇ ಹೇಳಿಕೆ ನೀಡುವ ಮುನ್ನ ಯೋಚಿಸಿ ಹೇಳಿಕೆ ನೀಡಬೇಕೆಂದು ನಟನಿಗೆ ನ್ಯಾಯಾಲಯ ಸೂಚಿಸಿದೆ.

ನೀಟ್ ನಡೆಯುವ ಮುನ್ನಾ ದಿನ ಮೂರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆಯನ್ನು ಪ್ರಸಕ್ತ ಪರಿಸ್ಥಿತಿಯಲ್ಲಿ ನಡೆಸುತ್ತಿರುವುದನ್ನು ಟೀಕಿಸಿ ನಟ ಸೂರ್ಯ ಪತ್ರ ಬರೆದು, ಅದರಲ್ಲಿ ಮನು ಧರ್ಮ ಪರೀಕ್ಷೆ ಹಾಗೂ ಮನುನೀತಿ ಪರೀಕ್ಷೆ ಎಂದು ಬಣ್ಣಿಸಿ ವಿದ್ಯಾರ್ಥಿಗಳ ಅವಕಾಶಗಳನ್ನು ಸೆಳೆಯುವ ಹೊರತಾಗಿ ಅವರನ್ನು ಕೊಲ್ಲುತ್ತದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News