ಜೈವಿಕ ಔಷಧ ಬ್ಯಾಕ್ಟೀರಿಯಾ ಕಾರ್ಖಾನೆಯಲ್ಲಿ ಸೋರಿಕೆ: ಸಾವಿರಾರು ಮಂದಿಗೆ ಸೋಂಕು

Update: 2020-09-18 14:13 GMT
ಸಾಂದರ್ಭಿಕ ಚಿತ್ರ

ಬೀಜಿಂಗ್, ಸೆ. 18: ವಾಯುವ್ಯ ಚೀನಾದ ಲಂಝೂ ನಗರದಲ್ಲಿ ಸಾವಿರಾರು ಜನರು ಬ್ಯಾಕ್ಟೀರಿಯವೊಂದರ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ ಎಂದು ಸಿಎನ್‌ಎನ್ ಸುದ್ದಿವಾಹಿನಿ ಗುರುವಾರ ವರದಿ ಮಾಡಿದೆ. ಪ್ರಾಣಿಗಳ ಲಸಿಕೆಗಳನ್ನು ತಯಾರಿಸುವ ಸರಕಾರಿ ಒಡೆತನದ ಜೈವಿಕ ಔಷಧಿ ತಯಾರಿಕಾ ಕಂಪೆನಿಯೊಂದರಲ್ಲಿ ಕಳೆದ ವರ್ಷ ಸಂಭವಿಸಿದ ಸೋರಿಕೆ ಬಳಿಕ ಈ ಸಾಂಕ್ರಾಮಿಕ ಹರಡಿದೆ.

ಬ್ರುಸೆಲ್ಲಾ ಎಂಬ ಬ್ಯಾಕ್ಟೀರಿಯವನ್ನು ಹೊತ್ತ ಸಾಕುಪ್ರಾಣಿಗಳ ಸಂಪರ್ಕಕ್ಕೆ ಬಂದವರಲ್ಲಿ ಬ್ರುಸಲಾಸಿಸ್ ಎಂಬ ರೋಗ ಕಾಣಿಸಿಕೊಳ್ಳುತ್ತದೆ. ತಲೆನೋವು, ಸ್ನಾಯು ನೋವು, ಜ್ವರ ಮತ್ತು ಬಳಲಿಕೆ ಅದರ ಲಕ್ಷಣಗಳು. ಅದನ್ನು ಮಾಲ್ಟಾ ಅಥವಾ ಮೆಡಿಟರೇನಿಯನ್ ಜ್ವರ ಎಂಬುದಾಗಿಯೂ ಕರೆಯಲಾಗುತ್ತದೆ. ಆದರೆ, ಈ ರೋಗ ಮಾನವರಿಂದ ಮಾನವರಿಗೆ ಹರಡುವುದು ಅಪರೂಪ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ತಿಳಿಸಿದೆ.

ಬ್ಯಾಕ್ಟೀರಿಯ ಮಿಶ್ರಿತ ಆಹಾರವನ್ನು ಸೇವಿಸಿದರೆ ಹಾಗೂ ಬ್ಯಾಕ್ಟೀರಿಯವನ್ನು ಉಸಿರಿನ ಮೂಲಕ ಒಳಗೆ ತೆಗೆದುಕೊಂಡರೆ ಹೆಚ್ಚಿನವರಿಗೆ ಈ ರೋಗದ ಸೋಂಕು ತಗಲುತ್ತದೆ.

3,245 ಮಂದಿಯಲ್ಲಿ ಈ ರೋಗ ಖಚಿತವಾಗಿದೆ ಎಂದು ಗನ್ಸು ಪ್ರಾಂತದ ಲಾಂಝೂನಲ್ಲಿರುವ ಆರೋಗ್ಯ ಆಯೋಗ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ. ಇನ್ನೂ 1,401 ಜನರಲ್ಲಿ ರೋಗದ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಿವೆ.

ಈ ರೋಗದಿಂದಾಗಿ ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ.

ಕಳೆದ ವರ್ಷದ ಜುಲೈ ಮತ್ತು ಆಗಸ್ಟ್ ತಿಂಗಳ ನಡುವಿನ ಅವಧಿಯಲ್ಲಿ ಲಾಂಝೂ ಜೈವಿಕ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಸೋರಿಕೆಯಿಂದಾಗಿ ಸೋಂಕು ಹರಡಿದೆ ಎಂದು ಆರೋಗ್ಯ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News