ನಾಳೆಯಿಂದ ಯುಎಇಯಲ್ಲಿ ಐಪಿಎಲ್ ಹಬ್ಬ

Update: 2020-09-18 18:21 GMT

ಅಬುಧಾಬಿ: ಇಲ್ಲಿನ ಶೇಖ್ ಝಾಹಿದ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮುಖಾಮುಖಿಯಾಗಲಿವೆ. 2019 ರ ಐಪಿಎಲ್ ಫೈನಲ್‌ನಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು, ಅಲ್ಲಿ ಮುಂಬೈ ಇಂಡಿಯನ್ಸ್ 1 ರನ್ ಅಂತರದಿಂದ ಜಯ ಗಳಿಸಿ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿತ್ತು. ಚೆನ್ನೈ ನಾಲ್ಕನೇ ಬಾರಿ ಪ್ರಶಸ್ತಿ ಎತ್ತುವ ಅವಕಾಶ ವಂಚಿತಗೊಂಡಿತ್ತು.

   2014ರ ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು ದುಬೈನಲ್ಲಿ ನಡೆಸಿದ ಹಣಾಹಣಿಯಲ್ಲಿ ಚೆನ್ನೈ 7 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿತ್ತು. ಬ್ರೆಂಡನ್ ಮೆಕಲಮ್ ಅಜೇಯ 71 ರನ್ ಮತ್ತು ಮೋಹಿತ್ ಶರ್ಮಾ ನಾಲ್ಕು ವಿಕೆಟ್‌ಗಳನ್ನು ಉಡಾಯಿಸಿ ಚೆನ್ನೈ ತಂಡದ ಗೆಲುವಿಗೆ ನೆರವಾಗಿದ್ದರು. ಎದುರಾಳಿ ಮುಂಬೈ ನಾಯಕ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿದ್ದರು.

ಮುಂಬೈ ಮತ್ತು ಚೆನ್ನೈ ಐಪಿಎಲ್‌ನ ಎರಡು ಅತ್ಯಂತ ಯಶಸ್ವಿ ಐಪಿಎಲ್ ತಂಡಗಳಾಗಿವೆ. ಕಳೆದ 12 ಆವೃತ್ತಿಗಳಲ್ಲಿ ಮೂರು ವಿಭಿನ್ನ ಸಂದರ್ಭಗಳಲ್ಲಿ ಐಪಿಎಲ್ ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹಣಾಹಣಿ ನಡೆಸಿದೆ. ಈ ಪೈಕಿ ಮುಂಬೈ 2-1 ಅಂತರದಲ್ಲಿ ಮೇಲುಗೈ ಸಾಧಿಸಿದೆ.

   ಈ ಬಾರಿ ಟ್ವೆಂಟಿ-20 ತಾರೆಯರಾದ ಚೆನ್ನೈನ ಸುರೇಶ್ ರೈನಾ, ಹರ್ಭಜನ್ ಸಿಂಗ್ ಮತ್ತು ಮುಂಬೈನ ಲಸಿತ್ ಮಾಲಿಂಗ ಈ ವರ್ಷದ ಆವೃತ್ತಿಯಲ್ಲಿ ಹೊರಗುಳಿದಿದ್ದಾರೆ.

 ಹೆಡ್ -ಟು -ಹೆಡ್ ದಾಖಲೆ

 ಐಪಿಎಲ್‌ನಲ್ಲಿ ಮುಂಬೈ ಮತ್ತು ಚೆನ್ನೈ ಪರಸ್ಪರ 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ 17 ಗೆಲುವುಗಳೊಂದಿಗೆ ಮುನ್ನಡೆ ಸಾಧಿಸಿದರೆ, ಚೆನ್ನೈ 11 ಬಾರಿ ಜಯಗಳಿಸಿದೆ. ಎಂಐ ಹೆಚ್ಚಿನ ಗೆಲುವಿನ ಸರಾಸರಿ ಶೇ. 60.71 ಹೊಂದಿದೆ.

 ಎಂಐ ಹೊರತುಪಡಿಸಿ ಬೇರೆ ಯಾವುದೇ ಸಕ್ರಿಯ ತಂಡವು ಸಿಎಸ್‌ಕೆ ವಿರುದ್ಧ ಶೇ 40 ಕ್ಕಿಂತ ಹೆಚ್ಚು ಗೆಲುವಿನ ಸರಾಸರಿ ಹೊಂದಿಲ್ಲ.

  ರೋಹಿತ್, ರೈನಾ ಯಶಸ್ವಿ ಬ್ಯಾಟ್ಸ್‌ಮನ್‌ಗಳು:      ಮುಂಬೈ ನಾಯಕ ರೋಹಿತ್ ಶರ್ಮಾ ಚೆನ್ನೈ ವಿರುದ್ಧ ಪ್ರಮುಖ ಸ್ಕೋರರ್ ಆಗಿದ್ದು, 614 ರನ್ ಗಳಿಸಿದ್ದಾರೆ. ಸಿಎಸ್‌ಕೆ ಪರ ರೈನಾ 704 ರನ್ ಗಳಿಸಿದ್ದಾರೆ. ರೈನಾ ಅನುಪಸ್ಥಿತಿಯಲ್ಲಿ ಹೆಚ್ಚಿನ ಹೊರೆ ಧೋನಿ ಹೆಗಲ ಮೇಲೆ ಬಿದ್ದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಅವರು 663 ರನ್ ಗಳಿಸಿದ್ದಾರೆ.

 ಬೌಲಿಂಗ್‌ನಲ್ಲಿ ಮಾಲಿಂಗ -ಪೊಲಾರ್ಡ್ ಮೇಲುಗೈ: 31 ವಿಕೆಟ್‌ಗಳೊಂದಿಗೆ ಮುಂಬೈನ ಲಸಿತ್ ಮಾಲಿಂಗ ಚೆನ್ನೈ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದವರು. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಪೊಲಾರ್ಡ್ ಸಿಎಸ್‌ಕೆಯ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ವೆಸ್ಟ್ ಇಂಡೀಸ್ ತಂಡದ ಸಹ ಆಟಗಾರ ಹಾಗೂ ಚೆನ್ನೈನ ಡ್ವೇನ್ ಬ್ರಾವೊ ಮುಂಬೈ ತಂಡದ 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಅತ್ಯುತ್ತಮ ಬೌಲಿಂಗ್ ಅಂಕಿ ಅಂಶಗಳು:

  ಹರ್ಭಜನ್ ಈಗ ಸಿಎಸ್‌ಕೆ ಭಾಗವಾಗಿರಬಹುದು, ಆದರೆ ಹಲವು ವರ್ಷಗಳ ಕಾಲ ಅನುಭವಿ ಆಫ್ ಸ್ಪಿನ್ನರ್ ಎಂಐ ಜೊತೆಗಿದ್ದರು. 2011ರ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ 18ಕ್ಕೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದು ಎಂಐ-ಸಿಎಸ್‌ಕೆ ಪಂದ್ಯಗಳಲ್ಲಿ ಒಬ್ಬ ಆಟಗಾರನ ಅತ್ಯುತ್ತಮ ವೈಯಕ್ತಿಕ ಬೌಲಿಂಗ್ ಪ್ರದರ್ಶನವಾಗಿದೆ. ಐಪಿಎಲ್ 2014ರಲ್ಲಿ ಚೆನ್ನೈ ವೇಗಿ ಮೋಹಿತ್ ಶರ್ಮಾ ( 14ಕ್ಕೆ 4) ಮುಂಬೈ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಬ್ಯಾಟಂಗ್‌ನಲ್ಲಿ ವೈಯಕ್ತಿಕ ಸಾಧನೆ : ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಮುಂಬೈನ ಸನತ್ ಜಯಸೂರ್ಯ ಔಟಾಗದೆ 114 ರನ್ ಗಳಿಸಿದ್ದರು. ಮುಂಬೈ ವಿರುದ್ಧ ಮೈಕೆಲ್ ಹಸ್ಸಿ 2013 ಋತುವಿನಲ್ಲಿ ಅಜೇಯ 86 ರನ್ ಗಳಿಸಿರುವುದು ಸಿಎಸ್‌ಕೆ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿ ಉಳಿದಿದೆ. 2011ರಲ್ಲಿ ರೋಹಿತ್ 87 ಮತ್ತು ಕಳೆದ ವರ್ಷದ ಫೈನಲ್‌ನಲ್ಲಿ ಶೇನ್ ವಾಟ್ಸನ್ 80 ರನ್ ಗಳಿಸಿರುವುದು ಕ್ರಮವಾಗಿ ಈಗಿನ ಮುಂಬೈ ಮತ್ತು ಚೆನ್ನೈ ತಂಡದ ಆಟಗಾರರ ಗರಿಷ್ಠ ಸ್ಕೋರ್‌ಗಳಾಗಿವೆ. ದಾಖಲೆ ನಿರ್ಮಿಸಲು ಕಾಯುತ್ತಿರುವ ಆಟಗಾರರು

     ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಐಪಿಎಲ್ 2020ರಲ್ಲಿ ದಾಖಲೆ ನಿರ್ಮಿಸಲು ಕಾಯುತ್ತಿದ್ದಾರೆ. ಸಿಎಸ್‌ಕೆ ಆಲ್‌ರೌಂಡರ್ ಜಡೇಜ 100 ಕ್ಕೂ ಹೆಚ್ಚು ವಿಕೆಟ್ ಮತ್ತು 2,000 ರನ್ ಗಳಿಸಿದ ಮೊದಲ ಐಪಿಎಲ್ ಆಟಗಾರ ಎನಿಸಿಕೊಳ್ಳಲು ಇನ್ನು 73 ರನ್ ಗಳಿಸಬೇಕಾಗಿದೆ. ವೇಗಿ ಬುಮ್ರಾಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 200 ವಿಕೆಟ್ ಗಳಿಸಿದ ಸಾಧನೆಗೆ 18 ವಿಕೆಟ್ ಉಡಾಯಿಸಬೇಕಾಗಿದೆ. 190 ಪಂದ್ಯಗಳನ್ನು ಆಡಿರುವ ಧೋನಿ ಐಪಿಎಲ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿರುವ ರೈನಾ (193) ದಾಖಲೆ ಸರಿಗಟ್ಟಲು ಇನ್ನು 3 ಪಂದ್ಯಗಳನ್ನು ಆಡಬೇಕಾಗಿದೆ. ಎಂಐ ನಾಯಕ ರೋಹಿತ್ ಐಪಿಎಲ್‌ನಲ್ಲಿ 5000 ರನ್‌ಗಳ ಮೈಲುಗಲ್ಲು ತಲುಪಲು 102 ರನ್ ಗಳಿಸಬೇಕಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News