ಉಡುಪಿ: ಒಂದೇ ತಂಡದಿಂದ ಮೂರು ಕಡೆ ಸುಲಿಗೆ

Update: 2020-09-19 08:12 GMT

ಉಡುಪಿ, ಸೆ.19: ಅಪರಿಚಿತ ವ್ಯಕ್ತಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಒಬ್ಬಂಟಿಯಾಗಿ ಸಂಚರಿಸುತ್ತಿದ್ದವರನ್ನು ಗುರಿ ಮಾಡಿಕೊಂಡು ಶನಿವಾರ ಬೆಳಗಿನ ಜಾವ ಮಣಿಪಾಲ ಮತ್ತು ಉಡುಪಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ಸುಲಿಗೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಮಣಿಪಾಲ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಧರಣೇಂದ್ರ, ಮಣಿಪಾಲ ಪ್ರೆಸ್‌ನ ಉದ್ಯೋಗಿ ಉದ್ಯಾವರ ನಿವಾಸಿ ಯತೀಂದ್ರ ಹಾಗೂ ಮೀನು ವ್ಯಾಪಾರಿ, ಅಲೆವೂರು ಬಾಡಿಗೆಮನೆ ನಿವಾಸಿ ನಿತೀಶ್ ಎಂಬವರಿಂದ ಸುಲಿಗೆಕೋರರು ಹಣ ಮತ್ತು ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ. ಇವರಲ್ಲಿ ಧರಣೇಂದ್ರ ಹಾಗೂ ಯತೀಂದ್ರ ಎಂಬವರಿಗೆ ಸುಲಿಗೆಕೋರರು ಆಯುಧವೊಂದರಲ್ಲಿ ಇರಿದ ಪರಿಣಾಮ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ದ್ವಿಚಕ್ರ ವಾಹನದಲ್ಲಿ ಬಂದ ಈ ಇಬ್ಬರು ವ್ಯಕ್ತಿಗಳು ಮೊದಲು ಬೆಳಗ್ಗೆ 4.:30ರ ಸುಮಾರಿಗೆ ಇಂದ್ರಾಳಿ ಪೆಟ್ರೋಲ್ ಬಂಕ್ ಸಮೀಪ ಬೆಂಗಳೂರಿನಿಂದ ರೈಲಿನಲ್ಲಿ ಬಂದು ಮಣಿಪಾಲದಲ್ಲಿರುವ ಮನೆಗೆ ತೆರಳುತ್ತಿದ್ದ ಧರಣೇಂದ್ರ ಅವರನ್ನು ತಡೆದು ನಿಲ್ಲಿಸಿ, ಅವರಲ್ಲಿದ್ದ ಮೊಬೈಲ್ ಹಾಗೂ 2000 ರೂ. ನಗದು ದೋಚಿದೆ. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಅವರಿಗೆ ಸುಲಿಗೆಕೋರರು, ತಮ್ಮಲ್ಲಿದ್ದ ಆಯುಧದಿಂದ ಚುಚ್ಚಿದ್ದಾರೆ ಎಂದು ದೂರಲಾಗಿದೆ.

ಅಲ್ಲಿಂದ ಸುಲಿಗೆಕೋರರು ನೇರ ಕುಕ್ಕಿಕಟ್ಟೆ ಡಯಾನ ಟಾಕೀಸ್ ಬಳಿ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಬೈಕಿನಲ್ಲಿ ಮಲ್ಪೆಗೆ ಮೀನು ಖರೀದಿಸಲು ತೆರಳುತ್ತಿದ್ದ ನಿತೀಶ್ ಅವರನ್ನು ತಡೆದು ನಿಲ್ಲಿಸಿದರು. ತಮ್ಮಲ್ಲಿದ್ದ ಆಯುಧವನ್ನು ತೋರಿಸಿದ ಇವರು, ನಿತೀಶ್ ಅವರ ಬಳಿ ಇದ್ದ ಮೊಬೈಲ್ ಹಾಗೂ 15 ಸಾವಿರ ರೂ. ನಗದು ದೋಚಿ ಪರಾರಿಯಾಯಿತು.

ಮುಂದುವರೆದ ಸುಲಿಗೆಕೋರರು ಅಲೆವೂರು ಗುಡ್ಡೆಯಂಗಡಿ ಜಂಕ್ಷನ್ ಬಳಿ ಬೆಳಗಿನ ಜಾವ 5:30ರ ಸುಮಾರಿಗೆ ಮಣಿಪಾಲ ಪ್ರೆಸ್‌ನಲ್ಲಿ ರಾತ್ರಿ ಪಾಳಿ ಮುಗಿಸಿ ಉದ್ಯಾವರದಲ್ಲಿರುವ ಮನೆಗೆ ತೆರಳುತ್ತಿದ್ದ ಯತೀಂದ್ರರನ್ನು ತಡೆದು ನಿಲ್ಲಿಸಿದರು. ಅವರಲ್ಲಿದ್ದ ಮೊಬೈಲ್ ದೋಚಿದ ಅವರು, ಆಕ್ಷೇಪ ವ್ಯಕ್ತಪಡಿಸಿದ ಯತೀಂದ್ರರ ಎದೆ ಮತ್ತು ಇತರ ಭಾಗಗಳಿಗೆ ಇರಿದು ಪರಾರಿಯಾಯಿತೆನ್ನಲಾಗಿದೆ. ಇಂದ್ರಾಳಿ ಮತ್ತು ಅಲೆವೂರು ಗುಡ್ಡೆಯಂಗಡಿ ನಡೆದ ಕೃತ್ಯದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮತ್ತು ಕುಕ್ಕಿಕಟ್ಟೆ ಘಟನೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವು ಕಡೆಗಳಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದ ದೃಶ್ಯವನ್ನು ಪರಿಶೀಲಿಸಿ ದಾಗ ಒಂದೇ ತಂಡ ಈ ಮೂರು ಕೃತ್ಯಗಳನ್ನು ಎಸಗಿರುವುದು ದೃಢಪಟ್ಟಿದೆ. ಈ ಬಗ್ಗೆ ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News