ಸೆ.28ರಿಂದ ಶ್ರೀಕೃಷ್ಣನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ

Update: 2020-09-19 13:43 GMT

ಉಡುಪಿ, ಸೆ.19: ಕೊರೋನ ಕಾರಣದಿಂದ ಕಳೆದ ಆರು ತಿಂಗಳಿನಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಶ್ರೀಕೃಷ್ಣ ಮಠದಲ್ಲಿ, ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರ ನಿರ್ಧಾರದಂತೆ ಸೆ.28ರಿಂದ ಶ್ರೀಕೃಷ್ಣನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು ಎಂದು ಶ್ರೀಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

ಶ್ರೀಕೃಷ್ಣಮಠದ ಕನಕ ಮಂಟಪದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು. ಕೊರೋನ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊರಡಿಸಿದ ಮಾರ್ಗಸೂಚಿಯಂತೆ ಮಾ.22ರಿಂದ ಶ್ರೀಕೃಷ್ಣ ಮಠದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು ಎಂದವರು ವಿವರಿಸಿದರು.

ಆದರೆ ಇದೀಗ ಸೆ.21ರಿಂದ ಕೇಂದ್ರ ಸರಕಾರ ಮಾರ್ಗಸೂಚಿಗಳನ್ನು ಸಡಿಲಿಸಿ ರುವುದರಿಂದ ಕೆಲವೊಂದು ಷರತ್ತುಗಳೊಂದಿಗೆ ಶ್ರೀಕೃಷ್ಣ ಮಠದಲ್ಲಿ ಸ್ಥಳೀಯರು ಹಾಗೂ ಪರವೂರಿನ ಭಕ್ತರಿಗೆ ಅನುಕೂಲವಾಗಲು ಸೆ.28ರಿಂದ ಕೆಲವೊಂದು ನಿಬಂಧನೆಗಳೊಂದಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದಾರೆ ಎಂದವರು ಹೇಳಿದರು.

ಮೂರು ಗಂಟೆಗಳ ಅವಕಾಶ: ಸೆ.28ರಿಂದ ಪ್ರತಿದಿನ ಅಪರಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಸದ್ಯಕ್ಕೆ ಭಕ್ತರಿಗೆ ಪ್ರವೇಶ ಕಲ್ಪಿಸ ಲಾಗುವುದು. ಎಲ್ಲರಿಗೂ ರಾಜಾಂಗಣದ ಬಳಿ ಇರುವ ಉತ್ತರ ದ್ವಾರದಿಂದ ಮಾತ್ರ ಪ್ರವೇಶಾವಕಾಶ. ದರ್ಶನಕ್ಕೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಹಾಗೂ ಸುರಕ್ಷತಾ ಅಂತರ ಕಡ್ಡಾಯ ಪಾಲಿಸಬೇಕು ಎಂದು ಗೋವಿಂದರಾಜ್ ತಿಳಿಸಿದರು.

ಮಠದ ಒಳಗೆ ಮಂತ್ರ ಪಠಣ, ಶಬ್ದ ಉಚ್ಛಾರಣೆ ಮಾಡುವಂತಿಲ್ಲ. ಸ್ಯಾನಿಟೈಸರ್ ಬಳಕೆಯೂ ಕಡ್ಡಾಯ. ಮುಂದಿನ ದಿನಗಳಲ್ಲಿ ಸ್ಥಳೀಯ ಭಕ್ತರಿಗೆ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ಅದೇ ರೀತಿ ಪರಿಸ್ಥಿತಿಗಳನ್ನು ಗಮನಿಸಿ ಭೋಜನ ಪ್ರಸಾದ ಮತ್ತು ತೀರ್ಥಪ್ರಸಾದ ಪ್ರಾರಂಭಿಸುವ ಬಗ್ಗೆ ಪರ್ಯಾಯ ಶ್ರೀಗಳು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಪ್ರಸ್ತುತ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದೆ. ಮಠದಲ್ಲಿ ಸೇವೆಗಳಿಗೆ ಅವಕಾಶವಿದ್ದಜು, ಭಕ್ತರು ಸೇವಾ ಕೌಂಟರಿನಲ್ಲಿ ಪ್ರಸಾದವನ್ನು ಸ್ವೀಕರಿಸಬಹುದು. ಮಠದ ಆವರಣದೊಳಗೆ ಯಾವುದೇ ಕಾರ್ಯಚಟುವಟಿಕೆಗಳಿಗೆ ಅವಕಾಶವಿಲ್ಲ. ಸದ್ಯಕ್ಕೆ ಹಿರಿಯ ನಾಗರಿಕರು ಹಾಗೂ ಚಿಕ್ಕ ಮಕ್ಕಳು ಮನೆಗಳಲ್ಲೇ ಇದ್ದು, ದೇವರ ಪ್ರಾರ್ಥನೆ ಮಾಡುವುದು ಉತ್ತಮ ಎಂದು ಶ್ರೀಗಳ ಅಭಿಲಾಷೆ ಎಂದೂ ಗೋವಿಂದರಾಜ್ ನುಡಿದರು.

ಭದ್ರತಾ ಕಾರಣಗಳಿಗೆ ಪ್ರವೇಶದ್ವಾರ ಬದಲು: ಶ್ರೀಕೃಷ್ಣನ ದರ್ಶನ ಪಡೆಯಲು ಇಚ್ಛಿಸುವ ಭಕ್ತರು, ಯಾತ್ರಾರ್ಥಿಗಳು ರಾಜಾಂಗಣದ ಬಳಿ ಇರುವ ಉತ್ತರ ದ್ವಾರದ ಮೂಲಕ ಭೋಜನಶಾಲೆಯ ಮೇಲ್ಗಡೆಯಿಂದ ಸಾಗಿ ಗರುಡ ದೇವರ ಬಳಿ ಕೆಳಗಿಳಿದು ದೇವರ ದರ್ಶನದ ಬಳಿಕ ಮುಖ್ಯಪ್ರಾಣ ದೇವರ ಬಳಿ ಇರುವ ಮೆಟ್ಟಿಲುಗಳ ಮೂಲಕ ಮುಂದೆ ಸಾಗಿ ನಿರ್ಗಮಿಸಬಹುದು. ಮಠದ ಭದ್ರತಾ ಕಾರಣಗಳಿಗೆ ಈ ಬದಲಾವಣೆ ಮಾಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಸ್ಥಳೀಯ ಭಕ್ತರು ರಥಬೀದಿಯಿಂದ ಮಧ್ವ ಸರೋವರದ ಮೇಲಿರುವ ದಾರಿಯಿಂದ ಸೇವೆ ಕಚೇರಿ ಬಳಿ ಸಾಗಿ ಅಲ್ಲಿಂದ ಮಠದೊಳಗೆ ಪ್ರವೇಶಿಸಿ ದೇವರ ದರ್ಶನ ಪಡೆಯಬಹುದು. ಇದಕ್ಕೆ ಪ್ರವೇಶ ಪತ್ರವನ್ನು ಪಡೆದುಕೊಳ್ಳಬೇಕು ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಠಾರಿ ಶ್ರೀರಮಣ ಆಚಾರ್ಯ, ಶ್ರೀಕೃಷ್ಣ ಸೇವಾ ಬಳಗದ ಪ್ರಧಾನ ಸಂಚಾಲಕರಾದ ವೈ.ಎನ್.ರಾಮಚಂದ್ರ ರಾವ್, ಯಶ್ಪಾಲ್ ಸುವರ್ಣ, ದಿನೇಶ್ ಪುತ್ರನ್, ಪ್ರದೀಪ್ ರಾವ್, ಸಂತೋಷ್‌ಕುಮಾರ್ ಉದ್ಯಾವರ,ಮಾಧವ ಉಪಾಧ್ಯಾಯ, ಶ್ರೀನಿವಾಸ ಪೆಜತ್ತಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News