ಮಂಗಳೂರು ವಿವಿ ಕಾಲೇಜು ಸಂಸ್ಥಾಪನಾ ದಿನಾಚರಣೆ

Update: 2020-09-19 13:45 GMT

ಮಂಗಳೂರು, ಸೆ.19: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ 152ನೆ ಸಂಸ್ಥಾಪನಾ ದಿನವನ್ನು ಇಂದು ಆಚರಿಸಲಾಯಿತು.

ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಚಿನ್ನಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸೇವಾ ಕ್ಷೇತ್ರವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದಿಂದ ಸಮಾಜದಲ್ಲಿ ಜನರ ನಡುವೆ ಕಂದಕ ನಿರ್ಮಾಣವಾಗಿದೆ ಎಂದು ಹೇಳಿದರು.

ಮಾನವ ಸಂಪನ್ಮೂಲದ ಸದ್ವಿನಿಯೋಗವಾಗದೆ, ಅರಿವಿನ ಹಂಚಿಕೆಯಾಗದೆ, ವಿಜ್ಞಾನ ನಮ್ಮನ್ನು ಆಳಿದರೆ ಅದು ಉತ್ತಮ ಲಕ್ಷಣವಲ್ಲ ಎಂದು ಹೇಳಿದ ಅವರು, ಅಗತ್ಯ ಮತ್ತು ಆದ್ಯತೆಗೆ ತಕ್ಕಂತೆ ಸಂಪ್ಮೂಲದ ಬಳಕೆಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಮಾತನಾಡಿ, ನೂತನ ಶಿಕ್ಷಣ ಪದ್ಧತಿ ಜಾರಿಯಾಗುವುದರಲ್ಲಿ ಯಾರಿಗೂ ಸಂದೇಹ ಬೇಡ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ 150ನೆ ವರ್ಷದ ಅಂಗವಾಗಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ನಡಾವಳಿಯ ಗ್ರಂಥರೂಪವನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ನೂತನ ಪ್ರವೇಶ ದ್ವಾರವನ್ನು ಕೂಡಾ ಈ ಸಂದರ್ಭ ಅನಾವರಣಗೊಳಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ಮಂಗಳೂರು ವಿವಿಯ ಸಿಂಡಿಕೇಟ್ ಮಂಡಳಿಯ ಸದಸ್ಯ ರವಿಚಂದ್ರ ಉಪಸ್ಥಿತರಿದ್ದರು. ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾ ಯಿತು. 2018-19ನೆ ಸಾಲಿನ ಬಿಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 10ನೆ ರ್ಯಾಂಕ್ ಗಳಿಸಿದ ಶರಣ್ಯಾ ಡಿ.ಕೆ., ಅರ್ಥಶಾಸ್ತ್ರದಲ್ಲಿ ಅಧಿಕ ಅಂಕಗಳಿಸಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ಚಿನ್ನದ ಪದಕಕ್ಕೆ ಭಾಜನರಾಗಿರುವ ಪವನ್ ಕುಮಾರ್ ಆಚಾರ್ಯ, ಹಿಂದಿ ಸ್ನಾತ ಕೋತ್ತರ ಪರೀಕ್ಷೆಯಲ್ಲಿ ವಿವಿ ಮಟ್ಟದಲ್ಲಿ ಮೊದಲ ರ್ಯಾಂಕ್‌ಗಳಿಸಿದ ರಕ್ಷಿತಾ, ಯೋಗ ವಿಜ್ಞಾನದಲ್ಲಿ ದ್ವಿತೀಯ ರ್ಯಾಂಕ್ ಪಡೆದ ಡಾ. ವಿನಯ ಪೂರ್ಣಿಮಾ ಎಸ್. ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿ ಸಂಘದ ಉಪ ನಿರ್ದೇಶಕ ಡಾ. ಎ. ಹರೀಶ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಕುಮಾರ್ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News