ಜಿಎಸ್‌ಟಿ-ನೆರೆ ಪರಿಹಾರ ಬಾಕಿ ಪಾವತಿಗೆ ಆಗ್ರಹಿಸಿ ಸಿಪಿಎಂ ಧರಣಿ

Update: 2020-09-19 13:46 GMT

ಉಡುಪಿ, ಸೆ.19: ಕರ್ನಾಟಕ ರಾಜ್ಯಕ್ಕೆ ಸಲ್ಲಬೇಕಾಗಿರುವ ಜಿಎಸ್‌ಟಿ ತೆರಿಗೆ ಬಾಕಿ, ನೆರೆ ಪರಿಹಾರ ಬಾಕಿ ಪಾವತಿಗೆ ಆಗ್ರಹಿಸಿ ಮತ್ತು ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ದಾಖಲಾಗಿರುವ ಸುಳ್ಳು ಮೊಕದ್ದಮೆ ವಿರೋಧಿಸಿ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ಸುಗ್ರಿವಾಜ್ಞೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡುವ ಕಾರ್ಮಿಕ ತಿದ್ದುಪಡಿ ಕಾಯ್ದೆಗಳು ಸೇರಿದಂತೆ ಎಲ್ಲ ಸುಗ್ರಿವಾಜ್ಞೆಗಳನ್ನು ವಾಪಾಸ್ಸು ಪಡೆಯಬೇಕು. ಇವುಗಳನ್ನು ಸಂಸದರು ವಿರೋಧಿಸಿ ಶಾಸನಗಳನ್ನಾ ಗಿಸುವ ಪ್ರಯತ್ನಗಳನ್ನು ವಿರೋಧಿಸ ಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಬಾಕಿ, ಬಜೆಟ್ ಅನುದಾನ ಬಾಕಿ, ಬರ ಹಾಗೂ ಅತಿವೃಷ್ಠಿ ಪರಿಹಾರ, ಕೋವಿಡ್ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕೋವಿಡ್ ಪರಿ ಹಾರವಾಗಿ ಮುಂದಿನ ಆರು ತಿಂಗಳು ಆದಾಯ ತೆರಿಗೆ ವ್ಯಾಪ್ತಿ ಕೆಳಗೆ ಬರುವ ಕುಟುಂಬಗಳಿಗೆ ತಲಾ ಮಾಸಿಕ 7500ರೂ. ಹಾಗೂ ತಲಾ ವ್ಯಕ್ತಿಗೆ 10 ಕೆ.ಜಿ. ಸಮಗ್ರ ಪಡಿತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಹಕ್ಕುಗಳ ಉಳಿವಿಗಾಗಿ ಶಾಂತಿಯುತ ರಾಜಕೀಯ ಚಳುವಳಿಗಳನ್ನು ಕ್ರಿಮಿನಲ್ ಅಪರಾಧಗಳೆಂದು ಬಿಂಬಿಸುವ ಸಂವಿಧಾನ ವಿರೋಧಿ ದುಷ್ಕೃತವನ್ನು ತಡೆಯುವಂತೆ ಸಂಸದರು ಒತ್ತಾಯಿಸಬೇಕು. ಅದೇ ರೀತಿ ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ದಾಖಲಾಗಿರುವ ಸುಳ್ಳು ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಆಪ್ತ ಕಾರ್ಯದರ್ಶಿ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯ ಕಾರಿ ಮಂಡಳಿ ಸದಸ್ಯರಾದ ಕೆ.ಶಂಕರ್, ಬಲ್ಕೀಸ್ ಕುಂದಾಪುರ, ಜಿಲ್ಲಾ ಸಮಿತಿ ಸದಸ್ಯ ಮಹಾಬಲ ವಡೇರ ಹೋಬಳಿ, ಮುಖಂಡರಾದ ಉಮೇಶ್ ಕುಂದರ್, ಸಂಜೀವ ನಾಯ್ಕಾ, ನಳಿನಿ, ಸರೋಜ, ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು: ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ಪ್ರವಾಸಿ ಮಂದಿರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಕಚೇರಿಯ ಮುಂದೆ ಇಂದು ಧರಣಿ ನಡೆಸಿದ ಸಿಪಿಎಂ ಬೈಂದೂರು ವಲಯ ಸಮಿತಿ, 12 ಬೇಡಿಕೆಗಳ ಪಟ್ಟಿಯನ್ನು ಸಂಸದರ ಕಛೇರಿಗೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ರಾಜ್ಯ ಮುಖಂಡರಾದ ಕೆ.ಶಂಕರ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ, ವಲಯ ಸಮಿತಿ ಸದಸ್ಯ ಸಂತೋಷ ಹೆಮ್ಮಾಡಿ, ನಾಗರತ್ನ ನಾಡ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಮಾಧವ ದೇವಾಡಿಗ, ಚಂದ್ರ ದೇವಾಡಿಗ, ರಾಜೀವ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News