ವಿಶ್ವಕರ್ಮ ಯುವಕರನ್ನು ಧರ್ಮಕ್ಕಾಗಿ ಬಳಸದೆ ಉದ್ಯೋಗ ಕೊಡಿ : ರಮೇಶ್ ಆಚಾರ್ಯ ಆಗ್ರಹ

Update: 2020-09-19 13:49 GMT

ಉಡುಪಿ, ಸೆ.19: ಕರಾವಳಿ ಜಿಲ್ಲೆಗಳ ವಿಶ್ವಕರ್ಮ ಯುವಕರಿಗೆ ಉದ್ಯೋಗ ಇಲ್ಲ. ಬಿಜೆಪಿಯವರು ಜಾತಿಮತ ಧರ್ಮಕ್ಕಾಗಿ ಸಮುದಾಯದ ಯುವಕರನ್ನು ದುಡಿಸಿಕೊಳ್ಳುತ್ತಿದ್ದಾರೆಯೇ ಹೊರತು ಅವರ ಅರ್ಹತೆಗೆ ತಕ್ಕ ಉದ್ಯೋಗ ನೀಡುತ್ತಿಲ್ಲ. ಸಮುದಾಯ ಪಂಚ ಕುಲಕಸುಬುಗಳನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಕೌಶಲ್ಯಗಳಿರುವ ಯುವಸಮುದಾಯದ ಕೈಗೆ ಉದ್ಯೋಗ ನೀಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯಕ್ಕೆ ಬಿಜೆಪಿ ಸರಕಾರದಿಂದ ನಿರೀಕ್ಷೆ ಮಾಡಿದಷ್ಟು ಅನು ಕೂಲಗಳು ಸಿಕ್ಕಿಲ್ಲ. ಕೊರೊನಾ ಸಂಕಷ್ಟದಲ್ಲಿ ಸಾಲಗಾರರ ಸಾಲಮನ್ನಾ, ಪ್ಯಾಕೇಜ್ ಘೋಷಣೆ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನೀಡುವ ಅನುದಾನ, ಯುವಕರಿಗೆ ಉದ್ಯೋಗ, ವಿಶ್ವಕರ್ಮ ಸಮಾಜಕ್ಕಾಗಿ ಯೋಜನೆ, ರಾಜಕೀಯ ಶಕ್ತಿಯನ್ನು ನೀಡುವ ವಿಚಾರದಲ್ಲಿ ನಮ್ಮ ನಿರೀಕ್ಷೆಯಂತೆ ಆಗಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ಹಾಗೂ ಪಕ್ಷವು ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿಗೆ ನೀಡಿದ ಭರವಸೆಯನ್ನು ಕೂಡ ಈಡೇರಿಸಿಲ್ಲ. ಇದರ ವಿರುದ್ಧ ಅವರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸರಕಾರದಿಂದ ವಿಶ್ವಕರ್ಮ ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮನವ ರಿಕೆ ಮಾಡಿ ಕೊಡುವ ಜೊತೆಗೆ ಸಮಾಜದ ಸಂಘಟನೆಯನ್ನು ಮಾಡಲಿದ್ದಾರೆ. ಮುಂದೆ ಸುಮಾರು 4ರಿಂದ 5 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ಮಾಡಲಾಗು ವುದು ಎಂದರು.

ಮೊದಲ ಹಂತವಾಗಿ ಮಹಾಸಭಾದ ಉಸ್ತುವಾರಿಗಳ ಮೂಲಕ ಸಂಘ ಟನೆಯ ಚಟುವಟಿಕೆ ಆರಂಭಿಸುತ್ತಿದ್ದೇವೆ. ಯುವ ಘಟಕದ ಅಧ್ಯಕ್ಷ ಮಳವಳ್ಳಿ ಶ್ರೀನಿವಾಸ್ ಉಡುಪಿ ಜಿಲ್ಲೆಯಲ್ಲಿ ತಾಲ್ಲೂಕು, ಹೋಬಳಿ, ಗ್ರಾಮ, ಯುವ ಮತ್ತು ಮಹಿಳಾ ಘಟಕಗಳ ರಚನೆಗಾಗಿ ಸಮಾಲೋಚನೆ ನಡೆಸಲಿದ್ದಾರೆ. ಅವರು ಸೆ.20 ಮತ್ತು 21ರಂದು ಉಡುಪಿ ಜಿಲ್ಲೆಗೆ ಆಗಮಿಸಿ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಮುಖಂಡ ಎಚ್.ರಮೇಶ್ ಆಚಾರ್ಯ ಹೆಬ್ರಿ, ಹಿರಿಯರಾದ ಗಂಗಾಧರ ಆಚಾರ್ಯ ಬಾರ್ಕೂರು, ಪ್ರಮುಖರಾದ ರಾಮಕೃಷ್ಣ ಆಚಾರ್ಯ ಕೋಟ, ರಾಜೇಶ್ ಆಚಾರ್ಯ ಬೈಂದೂರು, ಸುಶಾಂತ್ ಆಚಾರ್ಯ ಬೈಂದೂರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News