ಉಡುಪಿ: ಬಿರುಸುಗೊಂಡ ಮಳೆ

Update: 2020-09-19 16:13 GMT

ಉಡುಪಿ, ಸೆ.19: ಹವಾಮಾನ ಮುನ್ಸೂಚನೆಯ ಪ್ರಕಾರ ಇಂದಿನಿಂದ ಮೂರು ದಿನಗಳ ಕಾಲ (ಸೆ.19ರಿಂದ 21ರವರೆಗೆ) ಉಡುಪಿ ಸೇರಿದಂತೆ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಉಡುಪಿಯಲ್ಲಿ ಶನಿವಾರ ಅಪರಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ.

ಬೆಳಗಿನಿಂದ ಸಾಧಾರಣವಾಗಿದ್ದ ಮಳೆ ಅಪರಾಹ್ನ 3 ಗಂಟೆಯ ಬಳಿಕ ಬಿರುಸಿನಿಂದ ಸುರಿಯತೊಡಗಿದ್ದು, ಸಂಜೆಯಿಂದ ರಾತ್ರಿ 9 ರವರೆಗೂ ನಿರಂತರವಾಗಿ ಸುರಿಯಿತು. ಮಳೆಯೊಂದಿಗೆ ಗಾಳಿ ಇಲ್ಲದೇ ಇರುವುದಿಂದ ಯಾವುದೇ ಹಾನಿಯ ವರದಿ ಈವರೆಗೆ ಬಂದಿಲ್ಲ. ಆದರೆ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಹಾಗೂ ನೀರು ಹರಿಯಲು ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಯಿತು.

ಇಂದಿನಿಂದ ಸತತ ಮೂರು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಲಾಗಿದ್ದು, ಸರಾಸರಿ 205ಮಿ.ಮೀ. ಮಳೆಯಾಗುವ ಸಂಭವವಿದೆ ಎಂದು ಅದರಲ್ಲಿ ತಿಳಿಸಲಾಗಿದೆ. 23ರಂದು ಆರೆಂಜ್ ಅಲರ್ಟ್‌ನ್ನು ಘೋಷಿಸಲಾಗಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 20ಮಿ.ಮೀ.ಮಳೆಯಾಗಿದೆ. ಉಡುಪಿಯಲ್ಲಿ 33 ಮಿ.ಮೀ., ಕುಂದಾಪುರದಲ್ಲಿ 16.5 ಹಾಗೂ ಕಾರ್ಕಳದಲ್ಲಿ 14.5ಮಿ.ಮೀ. ಮಳೆ ಸುರಿದ ವರದಿ ಬಂದಿದೆ.

ಮರಬಿದ್ದು ಸಂಚಾರ, ವಿದ್ಯುತ್ ವ್ಯತ್ಯಯ: ಆದಿಉಡುಪಿಯ ಶಾಲೆಯ ಬಳಿ ದೊಡ್ಡ ಮರವೊಂದು ಇಂದು ಸಂಜೆ ರಸ್ತೆಗುರುಳಿದ ಪರಿಣಾಮ ಮಲ್ಪೆ-ಕರಾವಳಿ ಬೈಪಾಸ್ ನಡುವೆ ಸಂಚಾರ ಎರಡು ಗಂಟೆಗೂ ಅಧಿಕ ಕಾಲ ಅಸ್ತವ್ಯಸ್ತಗೊಂಡಿತು. ಅಲ್ಲದೇ ವಿದ್ಯುತ್ ಸಂಚಾರವೂ ಇದೇ ಅವಧಿಯಲ್ಲಿ ವ್ಯತ್ಯಯಗೊಂಡಿದೆ ಎಂದು ತಿಳಿದುಬಂದಿದೆ. 9ಗಂಟೆ ಸುಮಾರಿಗೆ ಮರವನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮ ಗೊಂಡಿದ್ದು, ವಿದ್ಯುತ್ ಸಂಪರ್ಕವನ್ನೂ ಮತೆ್ತ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News