ಎಂಆರ್‌ಪಿಎಲ್‌ನಲ್ಲಿ ತುರ್ತು ಅಣಕು ಕಾರ್ಯಾಚರಣೆ

Update: 2020-09-19 16:58 GMT

ಮಂಗಳೂರು, ಸೆ.19: ಪೆಟ್ರೋಲಿಯಂ ಸಂಸ್ಕರಣಾಗಾರ ಎಂಆರ್‌ಪಿಎಲ್ ತನ್ನ ಆವರಣದಲ್ಲಿ ಆನ್-ಸೈಟ್ ತುರ್ತು ಅಣಕು ಕಾರ್ಯಚರಣೆ ಯನ್ನು ಶನಿವಾರ ನಡೆಸಿತು.

ತುರ್ತು ಅಣಕು ಕಾರ್ಯಾಚರಣೆಯನ್ನು ಎಂಆರ್‌ಪಿಎಲ್‌ನ ಕಚ್ಚಾ ತೈಲ ಬಟ್ಟಿ ಇಳಿಸುವಿಕೆಯ (ಸಿಡಿಯು) ಘಟಕದಲ್ಲಿ (ಹಂತ -1) ಹಮ್ಮಿಕೊಳ್ಳ ಲಾಯಿತು. ಅಣಕು ಕಾರ್ಯಾಚರಣೆಯಲ್ಲಿ ಎಲ್‌ಪಿಜಿ ಸೋರಿಕೆಯ ಸನ್ನಿವೇಶದಲ್ಲಿ ನಡೆಸಲಾಯಿತು.

ಈ ಚಟುವಟಿಕೆಯು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯಡಿ ಬರುತ್ತದೆ. ಇದು ಕೈಗಾರಿಕೆಗಳ ತುರ್ತು ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಆಡಳಿತ ಮತ್ತು ಸರಕಾರಿ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ಎಂಎರ್‌ಪಿಎಲ್ ತನ್ನ ಅಗ್ನಿಶಾಮಕ ನಿರ್ವಹಣಾ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಈ ಸಮಯದಲ್ಲಿ ಪ್ರದರ್ಶಿಸಿತು. ಅಗ್ನಿಶಾಮಕ ಮತ್ತು ಸುರಕ್ಷತೆ, ಎಚ್.ಎಸ್.ಇ, ಕಾರ್ಯಾಚರಣೆ ಮತ್ತು ನಿರ್ವಹಣೆ ಮುಂತಾದ ವಿವಿಧ ವಿಭಾಗಗಳು ಉತ್ಸಾಹದಿಂದ ಚಟುವಟಿಕೆಯಲ್ಲಿ ಭಾಗವಹಿಸಿದ್ದವು.

ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕಾರ್ಯಾಚರಣೆಯನ್ನು ಆಸಕ್ತಿಯಿಂದ ವೀಕ್ಷಿಸಿದರು. ಪೆಟ್ರೋಲಿಯಂ ಸಂಸ್ಕರಣಾಗಾರಗಳ ಕಾರ್ಯವೈಖರಿಗೆ ಸಂಬಂಧಿಸಿದ ವಿವಿಧ ತಾಂತ್ರಿಕ ಮತ್ತು ಸುರಕ್ಷತಾ ಅಂಶಗಳ ಬಗ್ಗೆ ಚರ್ಚಿಸಿದರು. ಸಂಸ್ಕರಣಾಗಾರದೊಳಗಿನ ವಿಪತ್ತು ತಗ್ಗಿಸುವಿಕೆ ಮತ್ತು ಸುರಕ್ಷತಾ ನಿರ್ವಹಣೆಯ ಬಗ್ಗೆ ಎಂಆರ್‌ಪಿಎಲ್‌ನಿಂದ ವಿವಿಧ ತಾಂತ್ರಿಕ ವಿವರ ಹಾಗೂ ಕಾನೂನಾತ್ಮಕ ನಿಬಂಧನೆಗಳನ್ನು ಚರ್ಚಿಸಿದರು. ಉತ್ತಮವಾಗಿ ಪ್ರದರ್ಶಿಸಿದ ತುರ್ತುಪರಿಸ್ಥಿತಿ ನಿರ್ವಹಣೆಗಾಗಿ ಅವರು ಎಂಆರ್‌ಪಿಎಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್, ಸಂಜಯ್ ವರ್ಮಾ, ರಾಜೀವ್ ಕುಶ್ವಾ, ಬಿಎಚ್‌ವಿ ಪ್ರಸಾದ್ (ಇಡಿ-ಪ್ರಾಜೆಕ್ಟ್ಸ್) ಮತ್ತು ಇಲಾಂಗೋ (ಇ.ಡಿ-ತೈಲಾಗಾರ) ಮತ್ತು ಎಂಆರ್‌ಪಿಎಲ್‌ನ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು. ನೆರೆಹೊರೆಯ ಕೈಗಾರಿಕೆಗಳ ತಜ್ಞರು ವೀಕ್ಷಕರಾಗಿ ಭಾಗವಹಿಸಿದರು. ತುರ್ತುಸ್ಥಿತಿ ನಿರ್ವಹಣಾ ಸಾಮರ್ಥ್ಯಗಳನ್ನು ಪ್ರದರ್ಶಿಸುವಲ್ಲಿ ಎಂಆರ್‌ಪಿಎಲ್‌ನ ಪ್ರಯತ್ನಕ್ಕೆ ಕೈಜೋಡಿಸಿದರು.

ಈ ಸಂದರ್ಭ ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ ಅವರು ಮೌಲ್ಯಮಾಪನ ವಿಭಾಗದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯ ವಿಜಯ್ ಕುಮಾರ್, ದ.ಕ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮುಹಮ್ಮದ್ ಜುಲ್ಫಿಕರ್ ನವಾಝ್, ಸುರತ್ಕಲ್ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಚಂದ್ರಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News